ಮತದಾರರನ್ನು ಸೆಳೆಯಲು ದುರ್ಗಾ ಮಾತೆ ವೇಷ ತೊಟ್ಟ ಅಭ್ಯರ್ಥಿ

ಸೋಮವಾರ, 7 ಏಪ್ರಿಲ್ 2014 (13:54 IST)
ಗೆಲುವಿನ ಪಟ್ಟ ಧರಿಸಲು ಅಭ್ಯರ್ಥಿಗಳು ಮಾಡುವ ಕಸರತ್ತುಗಳು ಭಿನ್ನ ವಿಭಿನ್ನವಾಗಿರುತ್ತವೆ. ಮತದಾರರ ಮನ ಗೆಲ್ಲಲು ತಮ್ಮಿಂದ ಏನು ಸಾಧ್ಯವೋ ಅದನ್ನೆಲ್ಲವನ್ನು ಮಾಡುತ್ತಾರೆ. ದುಡ್ಡು ಚೆಲ್ಲುವುದು, ಮದ್ಯ ಸರಬರಾಜು,ಸೀರೆ, ಮಿಕ್ಸಿ, ಟಿವಿ ಹೀಗೆ ವಿವಿಧ ಆಮಿಷಗಳನ್ನು ತೋರಿಸುವುದು ಮತದಾನದ ಕೊನೆಯ ಕ್ಷಣದವರೆಗೂ ಸಾಮಾನ್ಯ. ಅಲ್ಲದೇ ಮಾಟ ಮಾಡಿಸುವುದು ಸಹ ನಡೆಯುತ್ತಿದೆ ಎಂದರೆ ನೀವು ನಂಬಲೇ ಬೇಕು.
PTI

ಕೆಲವು ಅಭ್ಯರ್ಥಿಗಳು ನಾನಾ ವೇಷ ಧರಿಸಿ ಮುಗ್ಧ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಅದಕ್ಕೆ ಉದಾಹರಣೆಯಾಗಿ ಇಂದೋರ್‌ನಿಂದ ಆಖಾಡಕ್ಕಿಳಿಯುತ್ತಿರುವ ಸಮಾಜವಾದಿ ಪಾರ್ಟಿಯ ನೇಹಾ ಶರ್ಮಾ ದುರ್ಗಾ ಮಾತೆಯಾಗಿ ಜನರನ್ನು ಸೆಳೆಯ ಹೊರಟಿದ್ದಾರೆ.

ಇಂದೋರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಕೈಯಲ್ಲಿ ತ್ರಿಶೂಲ, ತಲೆಗೆ ಕಿರೀಟ, ವಿವಿಧ ಆಭರಣ ತೊಟ್ಟು, ದುರ್ಗಾಮಾತೆ ವೇಷದ ಮೇಕಪ್ ಮಾಡಿಕೊಂಡು ರಸ್ತೆಯಲ್ಲಿ ನಡೆದು ಬಂದ ನೇಹಾ ತನ್ನ ವಿಭಿನ್ನ ರೂಪದಿಂದ ಕುತೂಹಲಕ್ಕೆ ಕಾರಣರಾದರು.

ಅವರ ಈ ಅವತಾರಕ್ಕೆ ಚುನಾವಣಾ ಆಯೋಗದ ಅಧಿಕಾರಿ ಡಿ.ಕೆ ನಾಗೇಂದ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ನೇಹಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ದೂರು ನಡೆಸಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ.

ವೆಬ್ದುನಿಯಾವನ್ನು ಓದಿ