ರಾಜಕೀಯ ಕೂಸು ಆಮ್ ಆದ್ಮಿಗೆ ಗುಜರಾತಿನಲ್ಲಿ ಫಂಡ್ ಕೊರತೆ

ಸೋಮವಾರ, 17 ಮಾರ್ಚ್ 2014 (15:05 IST)
PTI
ದೊಡ್ಡ ಪಕ್ಷಗಳ ನಡುವೆ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಗುಜರಾತಿನಲ್ಲಿ ಫಂಡ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರವನ್ನು ಬೀದಿ ನಾಟಕಗಳು ಮತ್ತು ಯುವಜನರಿಗೆ ತರಬೇತಿ ಮುಂತಾದ ಅಸಾಂಪ್ರದಾಯಿಕ ಮಾರ್ಗಗಳ ಮೂಲಕ ಮಾಡಲು ನಿರ್ಧರಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯಂತ ಘಟಾನುಘಟಿ ಪಕ್ಷಗಳಿಗೆ ಸಂದಾಯವಾಗುತ್ತಿರುವ ದೇಣಿಗೆಗಳಿಗೆ ಹೋಲಿಸಿದರೆ ಆಮ್ ಆದ್ಮಿಗೆ ಸಿಗುವ ದೇಣಿಗೆಗಳು ಕಡಿಮೆ.ಇದರಿಂದಾಗಿ ಅದು ಪೋಸ್ಟರ್‌ಗಳು, ಜಾಹೀರಾತುಗಳು, ಟಿವಿ, ರೇಡಿಯೋ ಅಥವಾ ಮುದ್ರಣಮಾಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ಸಾಂಪ್ರದಾಯಿಕ ವಿಧಾನಗಳ ಮೂಲಕ ಜನರ ಸಂಪರ್ಕವನ್ನು ಕೈಬಿಡುವುದಾಗಿ ತಿಳಿಸಿದೆ.

ನರೇಂದ್ರ ಮೋದಿ ಆಡಳಿತದ ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿಯಾಗಿ ಹೊಮ್ಮುವ ಆಕಾಂಕ್ಷೆಯನ್ನು ಎಎಪಿ ಹೊಂದಿದೆ. ಆದರೆ ನಾವು ಎಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮದ ಮೂಲಕ ಜಾಹೀರಾತು ಕೊಡುವಷ್ಟು ಸಾಮರ್ಥ್ಯ ಹೊಂದಿಲ್ಲ ಎಂದು ಎಎಪಿ ರಾಜ್ಯ ಸಂಚಾಲಕ ಸುಖದೇವ್ ಪಟೇಲ್ ತಿಳಿಸಿದರು. ಮನೆಯಿಂದ ಮನೆಗೆ ಪ್ರಚಾರ ಮುಂತಾದ ಸಾಂಪ್ರದಾಯಿಕ ವಿಧಾನಗಳ ಜತೆಗೆ, ನುಕ್ಕಾಡ್ ಚರ್ಚೆಗಳು, ಮೊಹಲ್ಲಾ ಸಭಾಗಳು ಮತ್ತು ಯುವಜನರಿಗೆ ತರಬೇತಿ ಮುಂತಾದವನ್ನು ಆಯೋಜಿಸಲಾಗುತ್ತದೆ ಎಂದು ಪಟೇಲ್ ಹೇಳಿದರು.

ವೆಬ್ದುನಿಯಾವನ್ನು ಓದಿ