ರಾಹುಲ್ ಗಾಂಧಿ ಕಾರ್ಯವೈಖರಿಯನ್ನು ಹೊಗಳಿದ ವರುಣ್ ಗಾಂಧಿ

ಬುಧವಾರ, 2 ಏಪ್ರಿಲ್ 2014 (15:27 IST)
PTI
ಮುಂಬರುವ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ರಾಹುಲ್ ಗಾಂಧಿ ಮತ್ತು ವರುಣ್ ಗಾಂಧಿ ಪರಸ್ಪರರ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಸುಲ್ತಾನ್‌ಪುರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ವರುಣ್ ಗಾಂಧಿ, ಸಹೋದರ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ಗಾಂಧಿಯ ಕಾರ್ಯಕ್ಷಮತೆಯನ್ನು ಹೊಗಳಿ ಬಿಜೆಪಿ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಲು ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಸಣ್ಣ ಕೈಗಾರಿಕೆಗಳು ಸ್ವಸಹಾಯ ಗುಂಪುಗಳು ಅಗತ್ಯವಾಗಿವೆ. ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದ್ದರು.

ಇಂದು ರಾಯಬರೇಲಿಯಲ್ಲಿ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ತಾಯಿ ಸೋನಿಯಾ ಗಾಂಧಿಯವರೊಂದಿಗೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನು ಸುದ್ದಿಗಾರರು ವರುಣ್ ಗಾಂಧಿ ಹೊಗಳಿಕೆಯ ಕುರಿತಂತೆ ಪ್ರಶ್ನಿಸಿದಾಗ, ವರುಣ್ ಹೇಳಿಕೆ ಸರಿಯಾಗಿದೆ. ಅಮೇಥಿಯೊಂದಿಗೆ ನನಗೆ ಗಾಢವಾದ ಸಂಬಂಧವಿದೆ. ಅಮೇಥಿಯಲ್ಲಿ ನಾನು ಕೈಗೊಂಡ ಕಾರ್ಯಗಳನ್ನು ಇತರರು ಶ್ಲಾಘಿಸುತ್ತಿರುವುದು ಸಂತಸ ತಂದಿದೆ ಎಂದರು.

ಆದರೆ, ನಂತರ ವರುಣ್ ಗಾಂಧಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಟ್ವೀಟ್ ಮಾಡಿ, ಯಾವುದೇ ಪಕ್ಷ ಅಥವಾ ಪಕ್ಷದ ಅಭ್ಯರ್ಥಿಯಾಗಿ ನಾನು ಹೇಳಿಕೆ ನೀಡಿಲ್ಲ. ನಾನು ಅಮೇಥಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ ಎಂದು ಕೇಳಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

ಕಳೆದ ತಿಂಗಳು ನಾನು ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿ ಬಿಜೆಪಿ ವರಿಷ್ಠರ ಕೋಪಕ್ಕೆ ತುತ್ತಾಗಿದ್ದರು.

ವರುಣ್ ಮತ್ತು ರಾಹುಲ್ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮೊಮ್ಮಕ್ಕಳಾಗಿದ್ದಾರೆ. ವರುಣ್ ತಂದೆ ಸಂಜಯ್ ಗಾಂಧಿ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು,ಅವರು 1980ರಲ್ಲಿ ವಿಮಾನ ದುರಂತದಲ್ಲಿ ಮೃತರಾದ ನಂತರ ಅವರ ಹಿರಿಯ ಸಹೋದರ ರಾಜೀವ್ ಗಾಂಧಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇದೀಗ ಅಮೇಥಿ ಕ್ಷೇತ್ರವನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ