ಲೋಕಸಭೆ ಚುನಾವಣೆ : ಕ್ರಿಮಿನಲ್ ಅಭ್ಯರ್ಥಿಗಳಿಗೆ ಮಣೆಹಾಕಿದ ಬಿಜೆಪಿ ಕಾಂಗ್ರೆಸ್

ಶನಿವಾರ, 22 ಮಾರ್ಚ್ 2014 (16:09 IST)
PTI
ದೇಶದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದೇಶಾದ್ಯಂತ ಹಲವು ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಿದ್ದು, ಈ ಪೈಕಿ ನೂರಾರು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳಿಂದ ಈವರೆಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಶೇ.30ರಷ್ಟು ಅಭ್ಯರ್ಥಿಗಳು ಅಪರಾಧಿಕ ಹಿನ್ನಲೆಯುಳ್ಳವರಾಗಿದ್ದಾರೆ ಎಂಬುದು ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿ ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿರುವ 280 ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳನ್ನು ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿ ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ಪರಿಶೀಲಿಸಿದ್ದು, ಶೇ.30ರಷ್ಟು ಅಭ್ಯರ್ಥಿಗಳು ಅಪರಾಧ ಪ್ರಕರಣಗಳನ್ನು ಮತ್ತು ಶೇ.13ರಷ್ಟು ಅಭ್ಯರ್ಥಿಗಳು ಕೊಲೆ ಮತ್ತು ಅಪಹರಣದಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಬಿಜೆಪಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶೇ.35ರಷ್ಟು ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದು, ಈ ಪೈಕಿ ಶೇ.17ರಷ್ಟು ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಶೇ.27ರಷ್ಟು ಅಭ್ಯರ್ಥಿಗಳು ಅಪರಾಧಿಕ ಹಿನ್ನಲೆಯುಳ್ಳವರಾಗಿದ್ದು, ಶೇ.10ರಷ್ಟು ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದೆಹಲಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿಯ ಸತೀಶ್ ದುಬೇ ಹಾಗೂ ಕಾಂಗ್ರೆಸ್‌ನ ರಮೇಶ್ ಚಂದ್ ತೊಮರ್ ಇಬ್ಬರೂ ಕೊಲೆಯತ್ನ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಚಂಡೀಗಢದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಪವನ್ ಬನ್ಸಾಲ್ ಅವರು ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ