ವಾರಣಾಸಿ: ಕೇಜ್ರಿವಾಲ್‌ರನ್ನು ಒಸಾಮಾ ಬಿನ್ ಲಾಡೆನ್‌ನಂತೆ ಬಿಂಬಿಸುತ್ತಿರುವ ಬಿಜೆಪಿ

ಮಂಗಳವಾರ, 8 ಏಪ್ರಿಲ್ 2014 (15:31 IST)
ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್‌ರವರನ್ನು ಭಯೋತ್ಪಾದಕರೆಂಬಂತೆ ಬಿಂಬಿಸಿ ಅವರ ಚಿತ್ರದ ಪಕ್ಕ ಮಶಿನ್ ಗನ್ ಇಟ್ಟು, ಬದಿಯಲ್ಲಿ ಎಕೆ 49 ಎಂದು ಬರೆದ ಪೋಸ್ಟರ್‌ಗಳು ದೇವಾಲಯಗಳ ಪಟ್ಟಣವೆಂದು ಕರೆಯಲಾಗುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಂಡುಬಂದಿವೆ.
PTI

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಇಲ್ಲಿಂದ ಕಣಕ್ಕಿಳಿಯುತ್ತಿರುವ ಕೇಜ್ರಿವಾಲ್ "ಉಗ್ರಗಾಮಿಗಳ ಬಗ್ಗೆ ಸಹಾನುಭೂತಿ" ಇರುವ ವ್ಯಕ್ತಿ ಎಂದು ಪ್ರಚಾರ ನಡೆಸಲಾಗುತ್ತಿದೆ. ಅಲ್ಲದೇ ಆಪ್ ರಾಷ್ಟ್ರೀಯ ಸಂಚಾಲಕ, ಅಲ್ ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಮುದಾಯಕ್ಕೆ ಸೇರಿದವರು ಎಂದು ಆನ್‌ಲೈನ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ.

ಜಮ್ಮುವಿನಲ್ಲಿ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ "ಆಪ್ ನಾಯಕ ಎ.ಕೆ. 49 ನಂತೆ ಮತ್ತು ಪಾಕಿಸ್ತಾನದ ಏಜೆಂಟ್. ಪಾಕಿಸ್ತಾನದ ಪರ ಮೂರು ಎ.ಕೆ ಗಳು ಅನನ್ಯ ಶಕ್ತಿಯಾಗಿ ಕಾಣಿಸಿಕೊಂಡಿವೆ. ಮೊದಲನೆಯದು ಎಕೆ 47 . ಅದನ್ನು ಕಾಶ್ಮೀರದಲ್ಲಿ ರಕ್ತಪಾತ ಮಾಡಲು ಬಳಸಲಾಗುತ್ತದೆ. ಎರಡನೆಯದು ನಮ್ಮ ಸೈನಿಕರ ಶಿರಚ್ಛೇದ ಮಾಡಿದ್ದು ಪಾಕಿಸ್ತಾನಿ ಸೈನಿಕರಲ್ಲ, ಪಾಕಿಸ್ತಾನದ ಸೈನಿಕರ ವೇಷ ಧರಿಸಿದ ಜನರು ಎಂದು ಸಂಸತ್ತಿಗೆ ಮಾಹಿತಿ ನೀಡುವ ಎ.ಕೆ. ಆಂಟನಿ".

"ಮೂರನೆಯ ಎಕೆ, ಸದ್ಯ ಹೊಸ ಪಕ್ಷಕ್ಕೆ ಜನ್ಮ ನೀಡಿರುವ ಎಕೆ 49" ಎಂದು ಆಪ್ ನಾಯಕ ಕೇಜ್ರಿವಾಲ್‌ರನ್ನು ಉದ್ದೇಶಿಸಿ ಹೇಳಿದ್ದರು. ಕೇಜ್ರಿವಾಲ್ ದೆಹಲಿಯಲ್ಲಿ 49 ದಿನಗಳ ಅಧಿಕಾರ ನಡೆಸಿದ್ದರು. ವಿಪರ್ಯಾಸವೆಂದರೆ, ಚುನಾವಣಾ ಆಯೋಗ ಈ ಭಾಷಣವನ್ನು ನಿರ್ಲಕ್ಷಿಸಿದೆ.

ವೆಬ್ದುನಿಯಾವನ್ನು ಓದಿ