ಅರವಿಂದ್ ಕೇಜ್ರಿವಾಲ್, ಸಹಚರರು ಪಾಕಿಸ್ತಾನದ ಏಜೆಂಟ್: ನರೇಂದ್ರ ಮೋದಿ

ಬುಧವಾರ, 26 ಮಾರ್ಚ್ 2014 (16:55 IST)
PTI
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ವಾರಣಾಸಿಯಿಂದ ಕಣಕ್ಕೆ ಇಳಿಯುವುದು ಖಚಿತವಾಗುತ್ತಿದ್ದಂತೆ ನರೇಂದ್ರ ಮೋದಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.

ಜಮ್ಮುವಿನ ಕಠುವಾ ಜಿಲ್ಲೆಯ ಹೀರಾನಗರ್ ಪಟ್ಟಣದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಪಾಕಿಸ್ತಾನದಲ್ಲಿ ಮೂವರು ಎಕೆಗಳನ್ನು ಹೊಗಳಲಾಗುತ್ತಿದೆ. ಒಂದು ಎಕೆ-47, ಎರಡನೇಯದು ಅರವಿಂದ್ ಕೇಜ್ರಿವಾಲ್ ಮೂರನೇಯದು ಎಕೆ ಆಂಟನಿ ಎಂದು ಲೇವಡಿ ಮಾಡಿದರು.

ಆಮ್ ಆದ್ಮಿ ಪಕ್ಷದ ದೇಣಿಗೆ ವೆಬ್‌ಸೈಟ್‌ನಲ್ಲಿ ಭಾರತದ ಭೂಭಾಗವನ್ನು ಪಾಕಿಸ್ತಾನಕ್ಕೆ ಸೇರ್ಪಡೆಗೊಳಿಸಿದೆ. ನಂತರ ಕೋಲಾಹಲ ಎದುರಾಗಿದ್ದರಿಂದ ತೆಗೆದುಹಾಕಿದೆ ಎಂದು ಕಿಡಿಕಾರಿದರು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸಹಚರ ಪ್ರಶಾಂತ್ ಭೂಷಣ್ ಹೇಳಿಕೆ ನೋಡಿದಲ್ಲಿ ಕೇಜ್ರಿವಾಲ್ ಮತ್ತು ಅವರ ಸಹಚರರು ಪಾಕಿಸ್ತಾನದ ಏಜೆಂಟ್‌ರಾಗಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಜಮ್ಮು ಕಾಶ್ಮೀರ ವಿವಾದವನ್ನು ಬಗೆಹರಿಸಲಾಗುವುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ತಿಯಾಗದ ಕಾರ್ಯವನ್ನು ಪೂರ್ಣಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತವನ್ನು ರಾಜಪರಂಪರೆಯಿಂದ ಮುಕ್ತಗೊಳಿಸಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ