ಗುಜರಾತ್ ದಂಗೆಯಲ್ಲಿ ಮೋದಿ ಪಾತ್ರದ ಚರ್ಚೆ ಅನಗತ್ಯ: ಶರದ್ ಪವಾರ್

ಸೋಮವಾರ, 3 ಫೆಬ್ರವರಿ 2014 (15:33 IST)
PTI
ಕಳೆದ 2002ರಲ್ಲಿ ಗುಜರಾತ್‌ನಲ್ಲಿ ನಡೆದ ದಂಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರಪರಾಧಿ ಎಂದು ನ್ಯಾಯಾಲಯಗಳು ತೀರ್ಪು ನೀಡಿದ್ದರಿಂದ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮೋದಿಯವರನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಮೋದಿಯವರನ್ನು ನಿರಪರಾಧಿ ಎಂದು ತೀರ್ಪು ನೀಡಿದ್ದರಿಂದ ಮೋದಿ ಬಗ್ಗೆ ವಾದ ವಿವಾದಗಳಿಗೆ ಅರ್ಥವಿಲ್ಲ. ದೇಶದ ಜನತೆಯಾದ ನಾವು ನ್ಯಾಯಾಲಯಗಳ ತೀರ್ಪಿಗೆ ಬದ್ಧವಾಗಿದ್ದೇವೆ. ನ್ಯಾಯಾಲಯಗಳ ತೀರ್ಪಿನ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳ್ಲಲಿ ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಚತ್ತೀಸ್‌ಗಢ್ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರಿಂದ ಬಿಜೆಪಿ ಪರ ವಾಲುತ್ತಿಲ್ಲ. ಬಿಜೆಪಿ ದೇಶದ ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಬಿಜೆಪಿಗೆ ಕೇಂದ್ರದಲ್ಲಿ ಸರಕಾರ ರಚಿಸುವಷ್ಟು ಅಗತ್ಯವಾದ ಬಹುಮತ ದೊರೆಯುವುದಿಲ್ಲ ಎಂದು ಭವಿಷ್ಯ ನುಡಿದರು.

ಕೇಂದ್ರದಲ್ಲಿ ಸ್ಥಿರವಾದ ಸರಕಾರವಿರಬೇಕು ಎನ್ನುವುದು ಮಹತ್ವದ ಸಂಗತಿ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾತ್ರ ಸ್ಥಿರ ಸರಕಾರ ನೀಡಲು ಸಾಧ್ಯ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅನೇಕ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದ್ದರೂ ಯುಪಿಎ ಸರಕಾರ ಸ್ಥಿರತೆ ಕಾಪಾಡಿಕೊಂಡಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ