ಬಿಜೆಪಿ ಮತ್ತು ಮೋದಿ ಸಮರ್ಥಕ ಆಪ್ ನಾಯಕ ಕುಮಾರ ವಿಶ್ವಾಸ್

ಶನಿವಾರ, 5 ಏಪ್ರಿಲ್ 2014 (09:37 IST)
ಸುದ್ದಿ ವಾಹಿನಿಯೊಂದರ ಪ್ರಶ್ನೆಗೆ ಉತ್ತರಿಸಿದ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ ವಿಶ್ವಾಸ್ ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ಆಯ್ಕೆಗಳನ್ನು ನೀಡಿದರೆ ಬಿಜೆಪಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಅವರು ಅಮೇಥಿ ಕ್ಷೇತ್ರದಿಂದ ರಾಹುಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
PTI

ಖಾಸಗಿ ಸುದ್ದಿ ವಾಹಿನಿ ವರದಿಗಾರರು ನೀವು ಮೋದಿ ಪ್ರೇಮಿಯೇ ಎಂದು ಕೇಳಿದಾಗ ಉತ್ತರಿಸಿದ ಕುಮಾರ್ "ನಾವು ಕವಿಗೋಷ್ಠಿಗೆ ಹೋದರೆ ಎಲ್ಲರಿಗಿಂತ ಮುಂದೆ ಕುಳಿತಿರುವವರ ಬಗ್ಗೆ ಚರ್ಚಿಸುತ್ತೇವೆ. ಇದು ಬಹಳ ಸರಳವಾದ ವಿಚಾರ "ಎಂದು ಹೇಳಿದರು.


ಕಾಂಗ್ರೆಸ್ ಮತ್ತು ಬಿಜೆಪಿ, ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು? ನೀವು ಯಾರನ್ನು ಬೆಂಬಲಿಸುತ್ತಿರಾ? ಎಂಬ ಪ್ರಶ್ನೆಗೆ ಪ್ರತಿಯಾಗಿ "ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ. ಇವೆರಡರ ನಡುವೆ ನನ್ನ ಆಯ್ಕೆ ಬಿಜೆಪಿ. ಗಾಜಿಯಾಬಾದ್ ಲೋಕಸಭಾ ಚುನಾವಣೆಯಲ್ಲಿ ನಾನು ರಾಜನಾಥ್ ಸಿಂಗ್‌ರವರಿಗೆ ಮತ ನೀಡಿದ್ದೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ" ಎಂದು ಅವರು ಹೇಳಿದರು.

ಆಮ್ ಆದ್ಮಿಗೆ ಸೇರುವ ಮೊದಲು ಕುಮಾರ ನರೇದ್ರ ಮೋದಿಯವರ ಅಭಿಮಾನಿಯಾಗಿದ್ದರು. ತಮ್ಮ ಕವನವೊಂದರಲ್ಲಿ ನರೇಂದ್ರ ಮೋದಿಯನ್ನು ಅವರು ಶಿವನಿಗೆ ಹೋಲಿಸಿದ್ದರು.

ಕೇಜ್ರಿವಾಲ್‌ರಿಗೆ ಒಮ್ಮೆ ಮಾಯಾವತಿ ಮತ್ತು ನರೇಂದ್ರ ಮೋದಿ ನಡುವೆ ಯಾರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತೀರಾ ಎಂದು ಕೇಳಿದಾಗ "ನನ್ನ ತಲೆಗೆ ಬಂದೂಕು ಹಿಡಿದು ಆ ಪ್ರಶ್ನೆ ಕೇಳಿದರೆ ನಾನು ಮೋದಿಯ ಕಡೆಗೆ ವಾಲುತ್ತೇನೆ" ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ