ಆಡ್ವಾಣಿಗೆ ಯಾವ ಸ್ಥಾನ ಬೇಕಾದ್ರೂ ಕೊಡಲು ಸಿದ್ದ; ಬಿಜೆಪಿ

ಶುಕ್ರವಾರ, 16 ಮೇ 2014 (11:43 IST)
ಎನ್‌ಡಿಎ ಸಂಚಾಲನಾ ಸಮಿತಿ ಅಧ್ಯಕ್ಷ ಸ್ಥಾನ ಅಥವಾ ಲೋಕಸಭಾ ಸ್ವೀಕರ್ ಹುದ್ದೆ ಸೇರಿದಂತೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಬಿಜೆಪಿ ವರಿಷ್ಠ ಆಡ್ವಾಣಿ ಒಪ್ಪಿದ್ದಾರೆ. ಆದರೆ ಸಂಪೂರ್ಣವಾಗಿ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಎರಡು ಹುದ್ದೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎಂಬ ಬಗ್ಗೆ ಆಡ್ವಾಣಿ ನಿರ್ಧಾರ ತಿಳಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. 
 
ನವದೆಹಲಿಯಲ್ಲಿ ಆರ್‌ಎಸ್‌ಎಸ್ ನಾಯಕರು ಮತ್ತು ಬಿಜೆಪಿ ನಾಯಕರು ನಡೆಸಿದ ಸಭೆ- ಸಮಾಲೋಚನೆಗಳ ಫಲಶೃತಿ ಇದು. ಇದರೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯಾವ ಆಂತರಿಕ ಅಡಚಣೆ ಇಲ್ಲದೆ ಆಡಳಿತ ಸೂತ್ರ ಹಿಡಿಯುವ ಹಾದಿ ಸುಗಮವಾಗಿದೆ.
 
 ಮುಜುಗರ ತಪ್ಪಿಸಿ
 
ವರಿಷ್ಠ ನಾಯಕರಾದ ಆಡ್ವಾಣಿ, ಮುರಳಿ ಮನೋಹರ ಜೋಷಿಗೆ ನೀಡಬಹುದಾದ ಸ್ಥಾನಮಾನಗಳ ಬಗ್ಗೆಯೂ ಮುಂಚಿತವಾಗಿ ನಿರ್ಧರಿಸುವಂತೆ ಆರ್‌ಎಸ್‌ಎಸ್ ಸೂಚಿಸಿತ್ತು. ಮೋದಿಯವರನ್ನು
 
ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗ ಆಡ್ವಾಣಿ ಅಪಸ್ವರ ಎತ್ತಿದ್ದ ಹಿನ್ನೆಲೆಯಲ್ಲಿ ಪಕ್ಷ  ಮುಜುಗರ ಎದುರಿಸಿದ್ದು ಮತ್ತೆ ಮರುಕಳಿಸಬಾರದೆಂಬುದು ಸಂಘ ಪರಿವಾರ ಆಶಯವಾಗಿತ್ತು. ಗುರುವಾರ ಬೆಳಗ್ಗೆ ಉಮಾ ಭಾರತಿ ಆಡ್ವಾಣಿಯವರಿಗೆ ಪಕ್ಷದ ಮತ್ತು ಸಂಘ ಪರಿವಾರದ ಇಂಗಿತವನ್ನು ತಿಳಿಸಿದ್ದರು. ಉಮಾ ಭಾರತಿ ಭೇಟಿ ವೇಳೆ ಆಡ್ವಾಣಿ  ಸಕಾರಾತ್ಮವಾಗಿ ಸ್ಪಂದಿಸಿದ್ದರಿಂದಾಗಿ ಸಂಜೆ ರಾಜನಾಥ್ ಸಿಂಗ್ ಆಡ್ವಾಣಿ ಅವರನ್ನು ಭೇಟಿ ಮಾಡಿದರು.         
 
ಮೋದಿಗೇ ಅಧಿಕಾರ : ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ಅಂತಿಮ ನಿರ್ಧಾರನ್ನು ಮೋದಿಯವರೇ ಕೈಗೊಳ್ಳಲಿದ್ದಾರೆ. ಆರ್‌ಎಸ್‌ಎಸ್ ನಾಯಕರು ಮೋದಿಗೆ ಈ ಅಧಿಕಾರ ನೀಡಿದ್ದಾರೆ.  ಈ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ, ಹಾಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕೇಂದ್ರ ಸಂಪುಟದಲ್ಲಿ ಎರಡನೇ ಸ್ಥಾನ ಪಡೆಯುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಯಿತು. ಅದರ ಜತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ನೇರವಾಗಿ ನರೇಂದ್ರ ಮೋದಿಯವರೇ ಸರ್ಕಾರ ರಚನೆ ಮತ್ತು ಇತರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್ ಮತ್ತು ಸರ್ಕಾರದ ನಡುವೆ ಯಾವುದೇ ಮಧ್ಯವರ್ತಿಗಳು ಪ್ರಮುಖ ಪಾತ್ರವಹಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಸುಷ್ಮಾ ಹಠ: ಮತ್ತೊಂದು ಬೆಳವಣಿಗೆಯಲ್ಲಿ ಪ್ರಮುಖ ಖಾತೆಗಳಾಗಿರುವ ಹಣಕಾಸು, ಗೃಹ, ವಿದೇಶಾಂಗ ಮತ್ತು ರಕ್ಷಣೆ ಈ ನಾಲ್ಕು ಖಾತೆಗಳಲ್ಲಿ ಪ್ರಮುಖವಾಗಿರುವುದೊಂದನ್ನು ತಮಗೇ ನೀಡಬೇಕು. ಕೇವಲ ಮೋದಿ ಸಂಪುಟದಲ್ಲಿ ಸ್ಥಾನಭರ್ತಿಗಾಗಿ ಸಚಿವ ಸ್ಥಾನ ಬೇಡವೇ ಬೇಡ ಎಂದು ಸುಷ್ಮಾ ಸ್ವರಾಜ್ ಅವರು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

http://elections.webdunia.com/karnataka-loksabha-election-results-2014.htm


http://elections.webdunia.com/Live-Lok-Sabha-Election-Results-2014-map.htm

 

ವೆಬ್ದುನಿಯಾವನ್ನು ಓದಿ