ಚುನಾವಣೆ ಹಿನ್ನೆಡೆ: ರಾಜ್ಯದ ಸಚಿವ ಸಂಪುಟ ಬದಲಾವಣೆಗೆ ಸಿದ್ದತೆ

ಶುಕ್ರವಾರ, 16 ಮೇ 2014 (11:36 IST)
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಬಾರಿ ಬದಲಾವಣೆ ಸಾಧ್ಯತೆ ನಿಚ್ಚಳವಾಗಿದ್ದು, ಮೇ 27ರಂದು ಸಚಿವ ಸಂಪುಟ ವಿಸ್ತರಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.
 
ಈ ಬಾರಿ ಸಂಪುಟ ವಿಸ್ತರಣೆ ಜತೆಗೆ ಕೆಲ ಸಚಿವ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಜತೆಗೆ ಸಂಪುಟದ ಇಬ್ಬರು ಹಿರಿಯ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ.
 
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಈ ಬಾರಿ ಸಂಪುಟ ಸೇರುವುದು ಬಹುತೇಕ ಖಾತ್ರಿಯಾಗಿದ್ದು, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರನ್ನು ವಯೋಸಹಜ ಕಾರಣ ನೀಡಿ ಮಂತ್ರಿ ಮಂಡಲದಿಂದ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ದೃಢಪಡಿಸಿವೆ. ಇದರ ಜತೆಗೆ ಎರಡರಿಂದ ಮೂರು ಸಚಿವರ ಖಾತೆ ಅದಲು-ಬದಲು ಮಾಡುವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಜತೆ ಚರ್ಚೆ ನಡೆಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ. ಫಲಿತಾಂಶ ಪ್ರತಿಕೂಲವಾದರೆ ಹಳೆ ಮೈಸೂರು ಭಾಗದ ಹಿರಿಯ ಸಚಿವರೊಬ್ಬರು 'ಸಿನಿಮೀಯ' ರೀತಿಯಲ್ಲಿ ಅಧಿಕಾರ ಕಳೆದುಕೊಳ್ಳಬಹುದೆಂಬ ಮಾಹಿತಿ ಕಾಂಗ್ರೆಸ್ ಪಾಳಯದಿಂದ ಹೊರಬಿದ್ದಿದೆ.
 
ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟವಾದ ನಂತರ ಹೈಕಮಾಂಡ್ ಮುಖಂಡರ ಮನಸ್ಥಿತಿ ಆಧರಿಸಿ ಈ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ 

http://elections.webdunia.com/karnataka-loksabha-election-results-2014.htm


http://elections.webdunia.com/Live-Lok-Sabha-Election-Results-2014-map.htm
 

ವೆಬ್ದುನಿಯಾವನ್ನು ಓದಿ