ಬಾಂಗ್ಲಾ:ಬಂಧಿತ ಉಗ್ರ ಒಬೈದುಲ್ಲಾ ದಾವೂದ್ ನಿಕಟವರ್ತಿ

ಶನಿವಾರ, 18 ಜುಲೈ 2009 (19:41 IST)
ಬಾಂಗ್ಲಾದಲ್ಲಿ ಸೆರೆ ಸಿಕ್ಕಿರುವ ಭಾರತದ ಉಗ್ರ ಒಬೈದುಲ್ಲಾ 1995ರಿಂದ ದೇಶದಲ್ಲಿ ಠಿಕಾಣಿ ಹೂಡಿದ್ದು,ಈತನಿಗೆ ಪಾಕಿಸ್ತಾನದ ಮೂಲದ ಉಗ್ರಗಾಮಿ ಸಂಘಟನೆ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಇರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಆಸಿಫ್ ರೆಝಾ ಕಮಾಂಡೋ ಫೋರ್ಸ್‌ನ (ಎಆರ್‌ಸಿಎಫ್) ಪ್ರಮುಖ ಮುಖಂಡ ಮುಫ್ತಿ ಒಬೈದುಲ್ಲಾನನ್ನು ನಿನ್ನೆ ಬಾಂಗ್ಲಾ ಪೊಲೀಸರು ಬಂಧಿಸಿದ್ದು, ಬಂಧಿತ ಒಬೈದುಲ್ಲಾ ಬಾಂಗ್ಲಾದಲ್ಲೂ ಕೂಡ ಸಂಘಟನೆಯ ಜಾಲವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ಈತ ಹುಜಿ ಮತ್ತು ಲಷ್ಕರ್ ಎ ತೊಯ್ಬಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಬಾಂಗ್ಲಾ ಮೆಟ್ರೋಪೊಲಿಟಿಯನ್ ಪೊಲೀಸ್ ಕಮೀಷನರ್(ಡಿಎಂಪಿ) ಎ.ಕೆ.ಎಂ.ಶಾಹಿದುಲ್ ಹೂಕ್ ತಿಳಿಸಿದ್ದಾರೆ.

'ನಾವು ಶೇಖ್ ಒಬೈದುಲ್ಲಾನನ್ನು ಬಂಧಿಸಿದ್ದೇವೆ. ನಮ್ಮ ಬಳಿ ಇರುವ ಮಾಹಿತಿಯಂತೆ ಈತ ಭಾರತೀಯ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ' ಎಂದು ಹೇಳಿದರು. ಅಲ್ಲದೇ ಅಫ್ಘಾನಿಸ್ತಾನದಲ್ಲಿ ಸೋವಿಯತ್ ವಿರುದ್ಧ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಒಬೈದುಲ್ಲಾ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾದ ಮುಖಂಡ ಅಮಿರ್ ರೆಜಾನ ಅಣತಿಯಂತೆ ಜಿಹಾದ್‌ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ವಿವರಿಸಿರುವುದಾಗಿ ಡೈಲಿ ಸ್ಟಾರ್ ತನ್ನ ವರದಿಯಲ್ಲಿ ಹೇಳಿದೆ.

ಪಶ್ಚಿಮ ಬಂಗಾಳದ ಹವೋರಾ ಜಿಲ್ಲೆಯ ನಿವಾಸಿಯಾಗಿರುವ ಶೇಖ್ ಒಬೈದುಲ್ಲಾ ಎಆರ್‌ಸಿಎಫ್ ಜಾಲವನ್ನು ಬಾಂಗ್ಲಾ ದೇಶಕ್ಕೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದ. ಈತ ಪ್ರತಿನಿಧಿಸುತ್ತಿರುವ ಸಂಘಟನೆ 2002ರಲ್ಲಿ ಕೋಲ್ಕತಾ ಅಮೆರಿಕನ್ ಸೆಂಟರ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆ ಹೊತ್ತಿತ್ತು. ಇದು ಬಾಂಗ್ಲಾದೇಶದ ಹರ್ಕತುಲ್ ಜಿಹಾದ್ ಮತ್ತು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾದ ಜೊತೆ ಸಂಬಂಧ ಹೊಂದಿರುವ ಸಂಘಟನೆಯಾಗಿತ್ತು.

ವೆಬ್ದುನಿಯಾವನ್ನು ಓದಿ