ಅಮೆರಿಕದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳ ಹತ್ಯೆ

ಸೋಮವಾರ, 30 ನವೆಂಬರ್ 2009 (14:54 IST)
ವಾಷಿಂಗ್ಟನ್ ವಾಯುನೆಲೆ ಬಳಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಅಧಿಕಾರಿಗಳು ತಮ್ಮ ಪಾಳಿ ಆರಂಭವಾಗುವುದಕ್ಕೆ ಮುಂಚೆ ಕಾಫೀ ಅಂಗಡಿಯಲ್ಲಿ ಕಾಫೀ ಹೀರುತ್ತಾ ಕುಳಿತಿದ್ದಾಗ, ಒಬ್ಬ ಬಂದೂಕುಧಾರಿ ಅಲ್ಲಿಗೆ ಪ್ರವೇಶಿಸಿ ಒಂದೇ ಸಮನೆ ಗುಂಡು ಹಾರಿಸಿದಾಗ ನಾಲ್ವರು ಅಧಿಕಾರಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ.

ಸತ್ತವರ ಗುರುತಿನ ಬಗ್ಗೆ ಪಿಯರ್ಸ್ ಕೌಂಟಿ ಶೆರೀಫ್ ಕಚೇರಿಯ ವಕ್ತಾರ ಎಡ್ ಟ್ರಾಯರ್ ಏನನ್ನೂ ಬಹಿರಂಗಪಡಿಸಿಲ್ಲ. ವಾಷಿಂಗ್ಟನ್ ಕಾನೂನು ಜಾರಿ ಸಂಸ್ಥೆಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು ಎಂದಷ್ಟೇ ಹೇಳಿದ್ದಾರೆ.ಪೊಲೀಸ್ ಅಧಿಕಾರಿಗಳ ಮೇಲೆ ನಿರ್ದಿಷ್ಟವಾಗಿ ಗುಂಡು ಹಾರಿಸಲಾಗಿದೆಯೆಂದು ನಂಬಲಾಗಿದ್ದು, ಕಾಫಿ ಶಾಪ್‌ನಲ್ಲಿದ್ದ ಉಳಿದ ಗ್ರಾಹಕರ ಮೇಲೆ ಗುಂಡು ಹಾರಿಸಿಲ್ಲವೆಂದು ತಿಳಿದುಬಂದಿದೆ.

ಇದು ದರೋಡೆ ಪ್ರಕರಣವಲ್ಲ. ಬಂದೂಕುಧಾರಿಗಳು ಒಳಕ್ಕೆ ಪ್ರವೇಶಿಸಿ ಪೊಲೀಸ್ ಅಧಿಕಾರಿಗಳ ಮೇಲೆ ಮಾತ್ರ ಗುಂಡುಹಾರಿಸಿದ್ದಾರೆಂದು ಟ್ರಾಯರ್ ತಿಳಿಸಿದ್ದಾರೆ. ದುರ್ದೈವಿಗಳು ಕೆಲವು ಕಾಗದಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡು ಹಾರಿಸಲಾಯಿತೆಂದು ಟ್ರಾಯರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ