ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಭಾನುವಾರ, 31 ಮೇ 2009 (12:46 IST)
ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಪುನರಪಿ ಜನಾಂಗೀಯ ಹಲ್ಲೆಯನ್ನು ಪ್ರತಿಭಟಿಸಿ ಆಸ್ಟ್ರೇಲಿಯಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿರುವ 25ರ ಹರೆಯದ ಶ್ರವಣ್ ಕುಮಾರ್ ಸೇರಿದಂತೆ ಹಲ್ಲೆಗೊಳಗಾಗಿರುವ ಬಲಿಪಶುಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ವಿದ್ಯಾರ್ಥಿಗಳ ರಾಷ್ಟ್ರೀಯ ಒಕ್ಕೂಟ ಸಂಘಟನೆಗಳು ಸಂಘಟಿಸಿರುವ 'ಶಾಂತಿ ರ‌್ಯಾಲಿ'ಯು ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ಹೊರಗಿನಿಂದ ಆರಂಭಗೊಂಡಿದೆ. ಇದೇ ಆಸ್ಪತ್ರೆಯಲ್ಲಿ ದಾಳಿಗೊಳಗಾಗಿರುವ ಶ್ರವಣ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿಹರೆಯದ ಯುವಕರ ತಂಡ ಒಂದು ಶ್ರವಣ್‌ ಮೇಲೆ ಹಲ್ಲೆ ನಡೆಸಿ ಸ್ಕ್ರೂ ಡ್ರೈವರ್‌ನಲ್ಲಿ ಆತನ ತಲೆಗೆ ಚುಚ್ಚಿದ್ದು ಮೆದುಳಿಗೆ ಹಾನಿಯಾಗಿದೆ.

ಅಸ್ಪತ್ರೆಯಿಂದ ಸ್ಪ್ರಿಂಗ್ ಸ್ಟ್ರೀಟ್‌ನಲ್ಲಿರುವ ವಿಕ್ಟೋರಿಯನ್ ಪಾರ್ಲಿಮೆಂಟಿಗೆ ತೆರಳಿದ ಪ್ರತಿಭಟನಾಕಾರರು 'ಭಾರತ್ ಮಾತಾ ಕಿ ಜೈ' ಎಂಬಂತಹ ಘೋಷಣೆಗಳನ್ನು ಕೂಗಿದರು.

ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಿ ಹಾಗೂ ಜನಾಂಗೀಯ ಹಿಂಸಾಚಾರ ನಿಲ್ಲಿಸಿ ಎಂಬಂತಹ ಸಂದೇಶ ಸಾರುವ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದು, ಜನಾಂಗೀಯ ಹಲ್ಲೆಗೊಳಗಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯಾ ಒದಗಿಸಬೇಕು ಎಂದು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ