ಇಂಡೊನೇಶಿಯಾದಲ್ಲಿ ಜೈಲ್‌ಬ್ರೇಕ್: 200 ಕೈದಿಗಳು ಪರಾರಿ

ಶುಕ್ರವಾರ, 12 ಜುಲೈ 2013 (11:15 IST)
ಜಕಾರ್ತಾ: ಇಂಡೊನೇಶಿಯಾದ ಮೆಡಾನ್‌ನಲ್ಲಿ ಗುರುವಾರ ರಾತ್ರಿ ಸುಮಾರು 200 ಕೈದಿಗಳು ಗರಿಷ್ಠ ಭದ್ರತೆಯ ಬಂಧೀಖಾನೆಯಿಂದ ತಪ್ಪಿಸಿಕೊಂಡ ಘಟನೆ ವರದಿಯಾಗಿದೆ. ನೀರು ಮತ್ತು ವಿದ್ಯುತ್ತಿನ ಕೊರತೆಯಿಂದ ಕೈದಿಗಳು ಆಕ್ರೋಶಗೊಂಡು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತೆಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ. ತಪ್ಪಿಸಿಕೊಂಡ 200 ಕೈದಿಗಳ ಪೈಕಿ 15 ಜನರು ಭಯೋತ್ಪಾದಕರೆಂದು ಇಂಡೊನೇಶಿಯಾ ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಸುಮಾತ್ರಾದಲ್ಲಿ 2000ನೇ ವರ್ಷದಲ್ಲಿ ಚರ್ಚ್‌ ಮೇಲೆ ಸರಣಿ ಬಾಂಬ್ ಸ್ಫೋಟದ ಘಟನೆಯಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿರುವ ಟೋನಿ ಟೋಗಾರ್ ಜತೆ ತಪ್ಪಿಸಿಕೊಂಡ 15 ಜನರು ಸಂಪರ್ಕ ಹೊಂದಿದ್ದಾರೆಂದು ಜಕಾರ್ತಾ ಪೋಸ್ಟ್ ವರದಿ ಮಾಡಿದೆ.ಸೆರೆಮನೆಯೊಳಗೆ ಬೆಂಕಿ ಕಾಣಿಸಿಕೊಂಡ ನಂತರ ಇಬ್ಬರು ಕೈದಿಗಳು ಮತ್ತು ಇಬ್ಬರು ಸೆರೆಮನೆ ಅಧಿಕಾರಿಗಳು ಸಾವನ್ನಪ್ಪಿದ್ದರು.

ಈ ಸಂದರ್ಭದಲ್ಲಿ ಉಂಟಾದ ಗೊಂದಲದಲ್ಲಿ ಕೈದಿಗಳು ಪರಾರಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ನೀರು ಮತ್ತು ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಗೊಂದಲಗಳು ಉಂಟಾಯಿತು. ಆಗ ಕೈದಿಗಳು ಪ್ರತಿಭಟನೆ ನಡೆಸಿ ಮುಖ್ಯ ದ್ವಾರದಿಂದ ತಪ್ಪಿಸಿಕೊಂಡರು ಎಂದು ಅಧಿಕಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ