'ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲದಿದ್ರೆ ನಾವೇ ಕೈಗೊಳ್ತೇವೆ'

ಸೋಮವಾರ, 30 ನವೆಂಬರ್ 2009 (19:11 IST)
ಲಷ್ಕರೆ ತೊಯ್ಬಾ ಮುಂತಾದ ಉಗ್ರಗಾಮಿಗಳನ್ನು ಆಯಕಟ್ಟಿನ ಅಸ್ತ್ರವಾಗಿ ಬಳಸಿಕೊಳ್ಳುವ ನೀತಿಯನ್ನು ಕೈಬಿಡುವಂತೆ ಅಮೆರಿಕ ಪಾಕಿಸ್ತಾನಕ್ಕೆ ಕಟುವಾದ ಸಂದೇಶ ಕಳಿಸಿದೆ. ಭಯೋತ್ಪಾದನೆ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿದ್ದರೆ, ಅಮೆರಿಕ ಯಾವುದೇ ಬೆಲೆ ತೆತ್ತಾದರೂ ಭಯೋತ್ಪಾದಕರ ಮ‌ೂಲೋತ್ಪಾಟನೆಗೆ ಕ್ರಮ ಕೈಗೊಳ್ಳುತ್ತದೆಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನ ಸಹಯೋಗಿ ಜರ್ದಾರಿಗೆ ಈ ಕುರಿತು ಪತ್ರದಲ್ಲಿ ಸಂದೇಶ ರವಾನಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನಕಾರಿ ಪರಿಸ್ಥಿತಿ ಶಮನ ಮಾಡುವಂತೆ ಕೂಡ ಪ್ರಸ್ತಾಪ ಮಂಡಿಸಿದ್ದಾರೆಂದು ಮಾಧ್ಯಮ ವರದಿ ಮಾಡಿದೆ. ಎರಡು ಪುಟಗಳ ಪತ್ರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ(ನಿವೃತ್ತ) ಜೇಮ್ಸ್ ಜೋನ್ಸ್ ಈ ತಿಂಗಳು ಇಸ್ಲಾಮಾಬಾದ್‌ಗೆ ಭೇಟಿನೀಡಿದ್ದಾಗ ಖುದ್ದಾಗಿ ಹಸ್ತಾಂತರಿಸಿದ್ದಾರೆ.

ಉಗ್ರಗಾಮಿಗಳನ್ನು ಮಟ್ಟಹಾಕಲು ಕಠಿಣ ಕ್ರಮ ಕೈಗೊಂಡರೆ, ಪಾಕಿಸ್ತಾನಕ್ಕೆ ವ್ಯೂಹಾತ್ಮಕ ಸಹಯೋಗ ವೃದ್ಧಿಸುವುದಾಗಿ ಮತ್ತು ಹೆಚ್ಚುವರಿ ಮಿಲಿಟರಿ, ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ತನ್ನ ಗುರಿಗಳ ಈಡೇರಿಕೆಗೆ ಬಂಡುಕೋರರ ಗುಂಪನ್ನು ಬಳಸಿಕೊಳ್ಳುವ ನೀತಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಒಬಾಮಾ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದು, ಭಯೋತ್ಪಾದಕ ಗುಂಪುಗಳ ವಿರುದ್ಧ ಸಾಮೀಪ್ಯದ ಸಹಯೋಗಕ್ಕೆ ಅವರು ಕರೆ ನೀಡಿದರು.

ಐದು ಭಯೋತ್ಪಾದಕ ಗುಂಪುಗಳನ್ನು ಅಲ್ ಖಾಯಿದಾ, ಆಫ್ಘನ್ ತಾಲಿಬಾನ್, ಹಕ್ಕಾನಿ ಜಾಲ, ಲಷ್ಕರೆ ತೊಯ್ಬಾ ಮತ್ತು ತೆಹ್ರಿಕ್-ಎ-ತಾಲಿಬಾನ್ ಎಂದು ಅವರು ಹೆಸರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ