ಕಾಬುಲ್ : ತಾಲಿಬಾನ್ ಉಗ್ರರಿಂದ ವಿಮಾನ ನಿಲ್ದಾಣ ಮೇಲೆ ದಾಳಿ

ಮಂಗಳವಾರ, 11 ಜೂನ್ 2013 (14:39 IST)
PR
PR
ನಿರ್ಮಾಣ ಹಂತದಲ್ಲಿರುವ ಎರಡು ಕಟ್ಟಡಗಳಲ್ಲಿ ಅವಿತುಕೊಂಡು ವಿಮಾನ ನಿಲ್ದಾಣ ಮತ್ತು ಸೇನಾ ನೆಲೆಗಳ ಮೇಲೆ ತಾಲಿಬಾನ್ ಉಗ್ರರು ಸೋಮವಾರ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದರು.

ಈ ದಾಳಿ ಹಿಮ್ಮೆಟ್ಟಿಸಲು ಆಫ್ಘಾನಿಸ್ತಾನದ ಭದ್ರತಾ ಪಡೆ ಪ್ರತಿ ದಾಳಿ ನಡೆಸಿದ್ದರಿಂದ ಐವರು ಉಗ್ರರು ಸತ್ತಿದ್ದಾರೆ ಹಾಗೂ ಆತ್ಮಾಹುತಿ ಬಾಂಬ್ ದಳದ ಇಬ್ಬರು ಉಗ್ರರು ಸ್ಫೋಟಿಸಿಕೊಂಡಿದ್ದಾರೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 4.30ರ ಸುಮಾರಿಗೆ ಉಗ್ರಗಾಮಿಗಳು ದಾಳಿ ನಡೆಸಿದರು. ಭಾರಿ ಸ್ಫೋಟದ ಸದ್ದು ಮತ್ತು ಸತತ ಗುಂಡಿನ ಚಕಮಕಿಯಿಂದ ಗಾಢ ನಿದ್ದೆಯಲ್ಲಿ ಇದ್ದ ನಾಗರಿಕರು ಗಾಬರಿಗೊಂಡರು.

ನಿರ್ಮಾಣ ಹಂತದ ಕಟ್ಟಡಗಳಲ್ಲಿ ಒಟ್ಟು ಏಳು ಉಗ್ರರು ಅವಿತುಕೊಂಡಿದ್ದರು. ಅವರಲ್ಲಿ ಐವರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಇನ್ನುಳಿದ ಇಬ್ಬರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥ ಮೊಹಮದ್ ಅಯೂಬ್ ಸಾಲಂಗಿ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಭದ್ರತಾ ಪಡೆಯ ಯೋಧರಿಗೆ ಮತ್ತು ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಭದ್ರತಾ ಪಡೆಯ ಸಕಾಲಿಕ ಪ್ರತಿ ದಾಳಿ ಮತ್ತು ಸಾಹಸವನ್ನು ಅಧ್ಯಕ್ಷ ಹಮೀದ್ ಕರ್ಜೈ ಅವರ ವಕ್ತಾರೆ ಅಡೆಲಾ ರಾಜ್ ಅವರು ಪ್ರಶಂಸಿದ್ದಾರೆ.

ಉಗ್ರಗಾಮಿಗಳು ವಿಮಾನ ನಿಲ್ದಾಣದ ಈಶಾನ್ಯ ಭಾಗದಿಂದ ದಾಳಿ ಮಾಡಿದ್ದಾರೆ. ಗ್ರೆನೇಡ್ ಉಡಾಯಿಸಲು ರಾಕೆಟ್‌ಗಳನ್ನು ಬಳಸಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಅಮರಿಕ ಮತ್ತು ನ್ಯಾಟೊ ಪಡೆಯ ಸೇನಾ ಟರ್ಮಿನಲ್ ಹಾಗೂ ನಾಗರಿಕ ಟರ್ಮಿನಲ್ ಇದೆ.ದಾಳಿಯಿಂದ ವಿಮಾನ ನಿಲ್ದಾಣಕ್ಕೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ.

ವೆಬ್ದುನಿಯಾವನ್ನು ಓದಿ