ಕೃಷ್ಣ 'ವಿಗ್ ರಾಜತಾಂತ್ರಿಕತೆ'-ಹೀನಾ ಫ್ಯಾಶನ್‌: ಮಾಧ್ಯಮ ಕಿಡಿ

ಶುಕ್ರವಾರ, 5 ಅಕ್ಟೋಬರ್ 2012 (13:42 IST)
PR
ಯುವನಾಯಕ ಬಿಲಾವಲ್‌ ಭುಟ್ಟೊ ಜತೆಗೆ ರೊಮಾನ್ಸ್‌ ನಡೆಸುತ್ತಿರುವ ಆರೋಪಕ್ಕೊಳಗಾಗಿರುವ ಪಾಕಿಸ್ಥಾನದ ಬೆಡಗಿನ ವಿದೇಶಾಂಗ ಸಚಿವೆ ಹೀನಾ ರಬ್ಟಾನಿ ಖಾರ್‌ ಅವರ ಉಡುಪು ಮತ್ತು ಗಾಂಭೀರ್ಯದ ಬಗ್ಗೆ ದೇಶದ ಮಾಧ್ಯಮಗಳು ಕಿಡಿ ಕಾರಿವೆ.

ವಿದೇಶಾಂಗ ಸಚಿವರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ತಮ್ಮ ಉಡುಪು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಇರಬೇಕಾದ ಗಾಂಭೀರ್ಯ, ನಡೆನುಡಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳುವ ಅಗತ್ಯವಿದೆ ಎಂದು ಮಾಧ್ಯಮಗಳು ಸಲಹೆ ಮಾಡಿವೆ.

ಹೀನಾ ರಬ್ಟಾನಿ ಖಾರ್‌ ಅವರು ಅತ್ಯಾಧುನಿಕ ಫ್ಯಾಷನ್‌ ಉಡುಪುಗಳು, ಅವುಗಳ ಬಣ್ಣ, ವಿನ್ಯಾಸ, ಅವರು ಹಿಡಿದುಕೊಳ್ಳುವ ಬ್ಯಾಗ್‌, ಧರಿಸುವ ಚಪ್ಪಲಿ ಇತ್ಯಾದಿಗಳನ್ನೆಲ್ಲ ಮಾಧ್ಯಮಗಳು ಜಾಲಾಡಿವೆ.

ಸಚಿವರಾಗಿರುವ ನೀವು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಧರಿಸುವ ಉಡುಪು, ಅಲಂಕಾರ ಮತ್ತು ಸ್ವಭಾವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಶಮ್ಶೆದ್‌ ಅಹ್ಮದ್‌ ಹೇಳಿರುವುದನ್ನು ದ ನ್ಯೂಸ್‌ ಪತ್ರಿಕೆ ವರದಿ ಮಾಡಿದೆ.

ಕೆಲವು ಸಮಯದ ಹಿಂದೆ ಹೀನಾ ರಬ್ಟಾನಿ ಖಾರ್‌ ಭಾರತಕ್ಕೆ ಭೇಟಿ ನೀಡಿದಾಗ ಅವರ ರಾಜತಾಂತ್ರಿಕ ಕೌಶಲದ ಬದಲಾಗಿ ಉಡುಪು, ಅಲಂಕಾರ ಮತ್ತು ವೈಯಾರದ ಬಗ್ಗೆಯೇ ಮಾಧ್ಯಮಗಳು ಹೆಚ್ಚು ಬರೆದಿರುವುದನ್ನು ಉಲ್ಲೇಖಿಸಿರುವ ಯಾವುದೇ ಸಚಿವರೂ ಅದರಲ್ಲೂ ವಿದೇಶಗಳ ಜತೆಗೆ ಸದಾ ಸಂಪರ್ಕದಲ್ಲಿರಬೇಕಾದವರು ಇಂತಹ ತಪ್ಪು ಕಾರಣಗಳಿಗಾಗಿ ಸುದ್ದಿಯ ಕೇಂದ್ರವಾಗಬಾರದು ಎಂದು ಎಚ್ಚರಿಸಿದ್ದಾರೆ.

ಹೀನಾ ಉಡುಪು ಮತ್ತು ಅಲಂಕಾರವನ್ನು ಶಮ್ಶೆದ್‌ 'ರಾಜತಾಂತ್ರಿಕವಾಗಿ ಅಸಮರ್ಪಕ ಅಲಂಕಾರ' ಎಂದು ಬಣ್ಣಿಸಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್‌. ಎಂ. ಕೃಷ್ಣ ಅವರು ಪದೇ ಪದೇ ವಿಗ್‌ ಬಣ್ಣ ಬದಲಾಯಿಸುತ್ತಿರುವುದನ್ನು ಅವರು 'ವಿಗ್‌ ರಾಜತಾಂತ್ರಿಕತೆ' ಎಂದು ಕರೆದಿದ್ದಾರೆ.

ವೆಬ್ದುನಿಯಾವನ್ನು ಓದಿ