ಕ್ಷಣಾರ್ಧದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರ ಅಭಿವೃದ್ದಿ

ಮಂಗಳವಾರ, 28 ಮೇ 2013 (11:38 IST)
PR
PR
ಕ್ಷಯ, ಮಲೇರಿಯ, ಎಚ್‌ಐವಿ ಸೋಂಕು ಅಥವಾ ಕ್ಯಾನ್ಸರ್ ಮುಂತಾದ ಯಾವುದೇ ರೋಗವನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಪತ್ತೆಹಚ್ಚುವ ಅತಿ ಕಡಿಮೆ ವೆಚ್ಚದ ಉಪಕರಣವೊಂದನ್ನು ತಾವು ಅಭಿವೃದ್ಧಿಪಡಿಸಿರುವುದಾಗಿ ಬ್ರಿಟನ್‌ನ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಕ್ಯೂ-ಪಿಒಸಿ ಎಂಬ ಹೆಸರಿನ 500 ಪೌಂಡ್ ಬೆಲೆಯ ಈ ಯಂತ್ರವು ಗಡ್ಡೆಗಳು ಹಾಗೂ ವಂಶವಾಹಿಗಳ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ರೋಗವನ್ನು ಪತ್ತೆ ಹಚ್ಚುವುದಲ್ಲದೆ, ಯಾವ ಔಷಧಿ ಸೇವಿಸಬೇಕೆಂದು ಸಲಹೆಯನ್ನೂ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಲಂಡನ್‌ನ ಪೂರ್ವ ಸಸೆಕ್ಸ್‌ನಲ್ಲಿರುವ ತನ್ನ ಗ್ಯಾರೇಜನ್ನೇ ಪ್ರಯೋಗಾಲಯವನ್ನಾಗಿಸಿರುವ 37ರ ಹರೆಯದ ಜೋನಾಥನ್ ಒ’ಹಲೊರನ್, ಡಿಎನ್‌ಎ ಮಾದರಿಯನ್ನು ವಿಶ್ಲೇಷಿಸುವ ಮೂಲಕ ಕಾಯಿಲೆಯನ್ನು ಖಚಿತವಾಗಿ ಪತ್ತೆಹಚ್ಚುವ ಈ ಅತ್ಯಪೂರ್ವ ವೈದ್ಯಕೀಯ ಉಪಕರಣವನ್ನು ಕಂಡು ಹಿಡಿದಿದ್ದಾರೆ.

ಹೊಸ ಉಪಕರಣವನ್ನು ಸದ್ಯ ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದ್ದು, ಸೂಕ್ತವೆಂದು ಕಂಡು ಬಂದಲ್ಲಿ ಮುಂದಿನ ವರ್ಷದಿಂದ ಇದು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಬಳಕೆಯಾಗಲಿದೆ ಎಂದು ವರದಿ ತಿಳಿಸಿದೆ.

ಹೊಸ ಉಪಕರಣವು ರೋಗವನ್ನು ಹತ್ತು ನಿಮಿಷಗಳಲ್ಲಿ ಪತ್ತೆಹಚ್ಚುವುದರ ಜೊತೆಗೆ ಪರಿಹಾರವನ್ನೂ ತಿಳಿಸುವ ಮೂಲಕ ವೈದ್ಯಕೀಯ ಲೋಕಕ್ಕೆ ಅಪೂರ್ವ ಕೊಡುಗೆಯಾಗಲಿದೆ ಮತ್ತು ಕ್ಯಾನ್ಸರ್ ರೋಗಿಗಳ ಪಾಲಿಗೆ ಇದೊಂದು ವರದಾನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ