ಚಿಕನ್‌ ಪ್ರಿಯರೇ ಇತ್ತ ಕಣ್ಣು ಹಾಯಿಸಿ : ಪತ್ತೆಯಾಗಿದೆ H6N1 ಎಂಬ ಕೋಳಿ ವೈರಸ್‌.

ಶುಕ್ರವಾರ, 15 ನವೆಂಬರ್ 2013 (11:58 IST)
PTI
PTI
ನೀವು ಮಾಂಸಾಹಾರ ಸೇವನೆ ಮಾಡ್ತೀರಾ? ಕೋಳಿ ಅಂದ್ರೆ ನಿಮಗೆ ಪಂಚ ಪ್ರಾಣಾನಾ? ಹಾಗಾದ್ರೆ ಈ ಕ್ಷಣದಿಂದಲೇ ನೀವು ಮಾಂಸಾಹಾರವನ್ನು ತ್ಯಜಿಸಿಬಿಡಿ. ಇಲ್ಲವಾದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ವಿಚಿತ್ರ ವೈರಸ್‌ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತೆ. ಯಾಕೆಂದ್ರೆ H6N1 ಎಂಬ ಹೊಸ ಕೋಳಿ ಜ್ವರ ಇದೀಗ ಚೀನಾದಲ್ಲಿ ಪತ್ತೆಯಾಗಿದ್ದು, ಇದು H5N1 (ಹಂದಿ ಜ್ವರ) ಗಿಂತಲೂ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

H6N1 ಎಂಬ ಅಪಾಯಕಾರಿ ವೈರಸ್‌ ಮೊಟ್ಟ ಮೊದಲನೆಯದಾಗಿ ಚೀನಾದ 20 ವರ್ಷದ ಯುವತಿಯನ್ನು ಆಕ್ರಮಿಸಿಕೊಂಡಿದ್ದು, ಇದು ಆಕೆಗೆ ಹೇಗೆ ಬಂತು ಅನ್ನೋದು ಇನ್ನೂ ನಿಗೂಢವಾಗಿದೆ. H6N1 ಎಂಬ ವೈರಸ್‌ ರೋಗವು ಹೆಚ್ಚಾಗಿ ಕೋಳಿಗಳಿಗೆ ಬರುವ ರೋಗವಾಗಿದ್ದು, ಮಾಂಸಾಹಾರ ಸೇವನೆ ಮಾಡದ ಚೀನಾ ಮಹಿಳೆಗೆ ಹೇಗೆ ಬಂತು ಎಂಬುದು ವಿಜ್ಞಾನಿಗಳಿಗೂ ಅಚ್ಚರಿಯನ್ನು ಉಂಟು ಮಾಡಿದೆ.

ಕೆಲವು ತಿಂಗಳ ಹಿಂದೆ ಅಂದ್ರೆ ಮೇ ತಿಂಗಳಲ್ಲಿ ಗಂಟಲು ಮತ್ತು ಕರುಳು ಬೇನೆಯ ಕಾರಣದಿಂದಾಗಿ 20 ವರ್ಷದ ಯುವತಿಯೊಬ್ಬಳು ಆಸ್ಪತ್ರೆ ಸೇರಿದ್ದಳು. ಆದ್ರೆ ಆಕೆಗೆ ಎಲ್ಲಾ ವಿಧವಾದ ಔಷಧಿಗಳನ್ನು ನೀಡಲಾಯಿತು. ಅದರೂ ಕೂಡ ಆಕೆಯ ಕರುಳು ರೋಗವನ್ನು ಗುಣಪಡಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಆಕೆಯ ಗಂಟಲಿನ ಸಾರವನ್ನು ಲ್ಯಾಬಿಗೆ ಕಳಿಸಿ ಪರಿಶೀಲನೆ ಮಾಡಿದಾಗ ಇದೊಂದು ಹೊಸ ರೋಗ ಎಂದು ತಿಳಿದು ಬಂದಿದೆ.

1995 ರಲ್ಲಿ H5N1 ಎಂಬ ರೋಗವು ಮೊದಲು ಚೀನಾದಲ್ಲಿ ಕಾಣಿಸಿಕೊಂಡಿತು. ಇದೀಗ ಇಂಥದ್ದೇ ರೋಗವನ್ನು ಹೋಲುವ H6N1 ಕೂಡ ಚೀನಾದಲ್ಲಿಯೇ ಮೊದಲು ಕಾಣಿಸಿಕೊಂಡಿದೆ. ಅಷ್ಟೆ ಅಲ್ಲ H7N9 ಎಂಬ ವೈರಸ್‌ ಕೂಡ ಚೀನಾದಲ್ಲಿ ಹಾವಳಿಯನ್ನು ಸೃಷ್ಟಿಸಿದ್ದು, ಜನರನ್ನು ಬಾಧಿಸುತ್ತಿದೆ. ಸದ್ಯಕ್ಕೆ ಈ H6N1 ರೋಗಕ್ಕೆ ಯಾವುದೇ ರೀತಿಯ ಔಷಧಿಗಳು ಲಭ್ಯವಿಲ್ಲ. ಹೀಗಾಗಿ ಮುಂಜಾಗೃತಾ ಕ್ರಮವೇ ಅತ್ಯಂತ ಸೂಕ್ತ ಎಂದು ಹೇಳಿರುವ ತಜ್ಞರು ಮಾಂಸಾಹಾರದಿಂದ ದೂರ ಇರುವುದು ಒಳ್ಳೆಯದು ಎಂಬ ಕಿವಿ ಮಾತುಗಳನ್ನು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ