ಟರ್ಕಿ, ಮಧ್ಯಪೂರ್ವಕ್ಕೆ ರೈಸ್ ಭೇಟಿ

ಗುರುವಾರ, 25 ಅಕ್ಟೋಬರ್ 2007 (13:22 IST)
ಕುರ್ದಿಶ್ ಬಂಡುಕೋರರು, ಪ್ರಾದೇಶಿಕ ಶಾಂತಿ ಮತ್ತು ಇರಾಕ್ ಬಗ್ಗೆ ಮಾತುಕತೆ ಸಲುವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಮುಂದಿನ ತಿಂಗಳು ಟರ್ಕಿ ಮತ್ತು ಮಧ್ಯಪೂರ್ವಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ರೈಸ್ ಪ್ರವಾಸದ ಕಾಲದಲ್ಲಿ ಅಂಕಾರಾ, ಇಸ್ತಾನ್‌ಬುಲ್, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಪ್ರದೇಶಗಳಿಗೆ ನ.1ರಿಂದ ನ.6ರವರೆಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸೀನ್ ಮೆಕ್‌ಕರ್ಮಾಕ್ ಬುಧವಾರ ತಿಳಿಸಿದರು.

ಇರಾಕ್ ಕುರಿತ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಲು ರೈಸ್ ನ. 2ಮತ್ತು 3ರಂದು ಇಸ್ತಾನ್‌ಬುಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ.
ಇರಾಕಿನ ಗಡಿಯಲ್ಲಿ ಟರ್ಕಿ ಪಡೆಗಳು ಮತ್ತು ಕುರ್ದಿ ಬಂಡುಕೋರರ ನಡುವೆ ಮಾರಕ ಕದನಗಳು ನಡೆಯುತ್ತಿದ್ದು, ಉದ್ವಿಗ್ನತೆ ಮೂಡಿರುವುದರಿಂದ ರೈಸ್ ಇಸ್ತಾನ್‌ಬುಲ್ ಸಭೆಗೆ ಮುನ್ನ ಅಂಕಾರಾದಲ್ಲಿ ಟರ್ಕಿ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆಂದು ಮೆಕ್‌ಕರ್ಮಾಕ್ ಹೇಳಿದರು.

ನ.4ರಿಂದ 6ರವರೆಗೆ ರೈಸ್ ಜೆರುಸಲೆಂ ಮತ್ತು ರಾಮಲ್ಲಾಗೆ ಬೇಟಿ ನೀಡಲಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ ಶಾಂತಿಮಾತುಕತೆಗಳಿಗೆ ಅಡಿಪಾಯ ಹಾಕುವ ಜಂಟಿ ದಾಖಲೆಯ ಕರಡು ರೂಪಿಸುವ ಗಂಭೀರ ಪ್ರಯತ್ನಗಳಿಗೆ ಬೆಂಬಲಿಸಲು ರೈಸ್ ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ