ಡಿಎನ್‌ಎ ಸಾಕ್ಷ್ಯ: 25 ವರ್ಷಗಳ ನಂತರ ಸಿಕ್ಕಿಬಿದ್ದ ಹಂತಕ

ಗುರುವಾರ, 19 ಸೆಪ್ಟಂಬರ್ 2013 (20:59 IST)
PR
PR
ಬರ್ಲಿನ್: 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅದನ್ನು ಮುಚ್ಚಿಹಾಕಲು ಬಾಲಕಿಯ ಕುತ್ತಿಗೆ ಹಿಚುಕಿ ಹತ್ಯೆ ಮಾಡಿದ್ದ ಹಂತಕ ನಿರಾಳವಾಗಿ ಉಸಿರಾಡಿದ್ದ. ಇನ್ನು ಈ ಹತ್ಯೆಯನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಭಾವಿಸಿದ್ದ. ಆದರೆ ಮಾಡಿದ ಪಾಪ ಬೆನ್ನು ಬಿಡದೇ ಅವನನ್ನು ಹಿಂಬಾಲಿಸಿ ಹತ್ಯೆ ನಡೆದ 25 ವರ್ಷಗಳಾದ ಮೇಲೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಡಿಎನ್‌ಎ ಸಾಕ್ಷ್ಯದ ಆಧಾರದ ಮೇಲೆ ಕೊನೆಗೂ ಹಿಡಿದರು. 1987ರ ನವೆಂಬರ್‌ನಲ್ಲಿ 9 ವರ್ಷ ವಯಸ್ಸಿನ ಬಾಲಕಿಯ ದೇಹವು ಒಸ್ನಾಬ್ರೂಕ್ ನಗರದಲ್ಲಿ ಪತ್ತೆಯಾಗಿತ್ತು.

ಕ್ರಿಸ್ಟಿನಾ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕುತ್ತಿಗೆ ಹಿಸುಕಿ ದುಷ್ಕರ್ಮಿ ಹತ್ಯೆ ಮಾಡಿದ್ದ. ಅಂದು ಎಂದಿನಂತೆ ಬಾಲಕಿ ಶಾಲೆ ಹೊರಡುವುದಕ್ಕೆ ಏಳುವಾಗ ಗಡಿಯಾರದ ಅಲಾರಾಂ ಕೇಳಿಸಲಿಲ್ಲ. ಇದರಿಂದ ಅವಳು ಗೆಳತಿಯರ ಸಂಗವಿಲ್ಲದೇ ಒಂಟಿಯಾಗಿ ಹೊರಟಿದ್ದಳು. ತೋಟವೊಂದರಲ್ಲಿ ಅಡ್ಡದಾರಿ ಹಿಡಿದಿದ್ದ ಬಾಲಕಿಗೆ ಮುಂದಿನ ಅನಾಹುತದ ಅರಿವಿರಿಲಿಲ್ಲ. 19 ವರ್ಷದ ಬಾಲಕ ಅವಳ ದಾರಿಗೆ ಅಡ್ಡಬಂದ. ಯುವಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಅವಳು ತಾಯಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದಾಗ, ಕುತ್ತಿಗೆ ಹಿಸುಕಿ ಸಾಯಿಸಿದ್ದ. ಮೃತ ಬಾಲಕಿಯ ಬಟ್ಟೆಗಳನ್ನು ವಶಕ್ಕೆ ತೆಗೆದುಕೊಂಡು ಸಂಗ್ರಹಿಸಲಾಗಿತ್ತು. ಹಂತಕನ ಚರ್ಮದ ಕಣಗಳನ್ನು ತೆಗೆದು ಸಂಗ್ರಹಿಸಲಾಗಿತ್ತು. ಏತನ್ಮಧ್ಯೆ, ವೈಜ್ಞಾನಿಕ ಪ್ರಗತಿಯಾಗಿ, ಡಿಎನ್‌ಎಯನ್ನು ಪ್ರತ್ಯೇಕಿಸುವುದು ಸಾಧ್ಯವಾಯಿತು. ಈ ಪ್ರಕರಣವು ಟೆಲಿವಿಷನ್ ಷೋ ಅಕ್ಟೆನ್‌ಜೈನ್ xy ನಲ್ಲಿ ಪ್ರಸಾರವಾಯಿತು.

ಇದರಿಂದ ಶಂಕಿತನ ಬಗ್ಗೆ ವೀಕ್ಷಕನೊಬ್ಬನಿಗೆ ಸುಳಿವು ಸಿಕ್ಕಿತು. ಶಂಕಿತನ ಡಿಎನ್‌ಎ ಮಾದರಿಯನ್ನು ಪರೀಕ್ಷಿಸಿದಾಗ, ಅದು ಹಂತಕನ ಡಿಎನ್‌ಎ ಜತೆ ಹೊಂದಿಕೆಯಾದ ಕೂಡಲೇ ಭಾನುವಾರ ಬೆಳಿಗ್ಗೆ ಅವನನ್ನು ಬಂಧಿಸಲಾಯಿತು. ಥಾಮಸ್ ಎಂಬ ಹೆಸರಿನ ಹಂತಕನಿಗೆ ಈಗ 45 ವರ್ಷಗಳಾಗಿದ್ದು, ಅಪರಾಧವನ್ನು ಮುಚ್ಚಿಹಾಕಲು ಹತ್ಯೆಮಾಡಿದ ಆರೋಪವನ್ನು ಹೊರಿಸಲಾಗಿದೆ. ಕೊನೆಗೂ 25 ವರ್ಷಗಳ ದೀರ್ಘಾವಧಿಯ ಬಳಿಕ ಅಪರಾಧಿ ಡಿಎನ್‌ಎ ಸಾಕ್ಷ್ಯದ ಮೂಲಕ ಸಿಕ್ಕಿಬಿದ್ದ.

ವೆಬ್ದುನಿಯಾವನ್ನು ಓದಿ