ತಾಲಿಬಾನಿಗಳ ವಿರುದ್ಧ ತೊಡೆ ತಟ್ಟಿದ ಪಾಕ್: 77 ಉಗ್ರರ ಸಂಹಾರ

ಶನಿವಾರ, 20 ಡಿಸೆಂಬರ್ 2014 (13:21 IST)
ಇತ್ತೀಚೆಗೆ ಇಲ್ಲಿನ ಪೇಶಾವರದ ಶಾಲಾ ಮಕ್ಕಳ ಮೇಲೆ ನಡೆಸಲಾಗಿದ್ದ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಉಗ್ರನಾಗಿದ್ದ ಫಜುವುಲ್ಲಾನನ್ನು ವೈಮಾನಿಕ ದಾಳಿ ನಡೆಸುವ ಮೂಲಕ ಆಫ್ಘಾನಿಸ್ತಾನದ ಗಡಿಯಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಪಾಕ್ ಸೇನಾ ಪಡೆ ಘೋಷಿಸಿದೆ. 
 
ಈ ಕಾರ್ಯಾಚರಣೆಯನ್ನು ಪಾಕ್ ಹಾಗೂ ಆಫ್ಘಾನಿಸ್ತಾನದ ಸೇನಾಪಡೆಗಳು ಜಂಟಿಯಾಗಿ ನಡೆಸಿದ್ದು, ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯ ಮುಖ್ಯಸ್ಥ, ಪೇಶಾವರ ಕೃತ್ಯದ ಮಾಸ್ಟರ್ ಮೈಂಡ್ ಉಗ್ರ ಫಜುವುಲ್ಲಾ ಸೇರಿದಂತೆ ಸುಮಾರು 77 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಇವರೆಲ್ಲರೂ ಕೂಡ ಆಫ್ಘಾನಿಸ್ತಾನದ ಗಡಿ ಭಾಗದಲ್ಲಿ ಅಡಗಿ ಕುಳಿತಿದ್ದರು ಎಂದು ಸೇನಾ ಪಡೆ ತಿಳಿಸಿದೆ. 
 
ಇನ್ನು ಮೂಲ ತಾಲಿಬಾನ್ ಸಂಘಟನೆಯಿಂದ ಪ್ರತ್ಯೇಕವಾಗಿದ್ದ ಫಜುವುಲ್ಲಾ, ಸ್ವತಃ ತೆಹ್ರಿಕ್-ಎ-ತಾಲಿಬಾನ್ ಎಂಬ ಪ್ರತ್ಯೇಕ ಭಯೋತ್ಪಾದನಾ ಸಂಘಟನೆಯನ್ನು ಕಟ್ಟಿದ್ದ. ಈ ಮೂಲಕ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಗಳಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳನ್ನು ಎಸಗುತ್ತಿದ್ದ. ಇದಲ್ಲದೆ ಪಾಕಿಸ್ತಾನದಲ್ಲಿ ಅನಧೀಕೃತ ರೈಲು ಸಂಚಾರ ಆರಂಭಿಸಿದ್ದ. ಅಲ್ಲದೆ ಅದರಲ್ಲಿ ರೇಡಿಯೋ ಅಳವಡಿಸಿ ಮಹಿಳಾ ಶಿಕ್ಷಣ ವಿರೋಧಿ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದ. ಈ ಮೂಲಕ ಮುಸ್ಲಿಂ ಮಹಿಳೆಯರು ಅಕ್ಷರಸ್ಥರಾಗುವುದನ್ನು ಖಂಡಿಸುತ್ತಿದ್ದ. ಇನ್ನು ಮಲಲಾ ಮೇಲಿನ ದಾಳಿಗೂ ಈತನೇ ಕಾರಣನಾಗಿದ್ದ ಎಂದು ಪಾಕ್ ಸರ್ಕಾರ ತಿಳಿಸಿದೆ.  
 
ಇಲ್ಲಿನ ಪೇಶಾವರದ ಸೈನಿಕ ಶಾಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ 150ಕ್ಕೂ ಹೆಚ್ಚು ಮಕ್ಕಳನ್ನು ಹತ್ಯೆಗೈಯ್ಯುವ ಮೂಲಕ ತಮ್ಮ ಪೈಶಾಚಿಕತೆಯನ್ನು ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ತಾಲಿಬಾನ್ ಸಂಘಟನೆಯನ್ನು ಹತ್ತಿಕ್ಕಲು ನಿರ್ಧರಿಸಿದ್ದು, ಆಫ್ಘಾನಿಸ್ತಾನದ ಜೊತೆಗೂಡಿ ತಾಲಿಬಾನಿಗಳ ಹತ್ಯೆಗೆ ಸಂಚಕಾರ ಹೂಡುತ್ತಿದೆ. ಇದು ಪಾಕ್ ತಾಲಿಬಾನಿಗಳ ವಿರುದ್ಧ ಕೈಗೊಂಡಿರುವ ಪ್ರತೀಕಾರದ ಮೊದಲ ಹೆಜ್ಜೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ