ದೇವಳ, ಬಾಲಿವುಡ್, ಶಿವಸೇನೆ ನಾಯಕರು ಉಗ್ರರ ಗುರಿಯಂತೆ!

ಮಂಗಳವಾರ, 15 ಡಿಸೆಂಬರ್ 2009 (11:15 IST)
ವಿಶ್ವವಿಖ್ಯಾತ ಗುಜರಾತ್‌ನ ಸೋಮನಾಥ ದೇವಳ, ಬಾಲಿವುಡ್ ನಟರು ಮತ್ತು ಶಿವಸೇನಾ ನಾಯಕರ ಮೇಲೆ ಮುಂಬೈ ರೀತಿಯ ದಾಳಿಗಳನ್ನು ನಡೆಸಲು ಲಷ್ಕರ್ ಇ ತೋಯ್ಬಾ ಉಗ್ರಗಾಮಿ ಸಂಘಟನೆ ಯೋಜನೆ ರೂಪಿಸಿತ್ತು ಎಂದು ಎಫ್‌ಬಿಐ ಬಯಲುಗೊಳಿಸಿದೆ.

ಸೋಮನಾಥ ದೇವಸ್ಥಾನ, ಬಾಲಿವುಡ್ ನಟರು ಮತ್ತು ಶಿವಸೇನೆಯ ನಾಯಕರು ಲಷ್ಕರ್ ಗುರಿಯಾಗಿರುವುದನ್ನು ಎಫ್‌ಬಿಐ ಇದೇ ಮೊದಲ ಬಾರಿಗೆ ತನ್ನ ವರದಿಯಲ್ಲಿ ತಿಳಿಸಿದೆ.

ಚಿಕಾಗೋದಲ್ಲಿನ ನ್ಯಾಯಾಲಯಕ್ಕೆ ಶಂಕಿತ ಉಗ್ರ ಪಾಕಿಸ್ತಾನಿ ಸಂಜಾತ ಕೆನಡಾ ಉದ್ಯಮಿ ತಹಾವುರ್ ಹುಸೈನ್ ರಾಣಾ ಸಲ್ಲಿಸಿರುವ ಜಾಮೀನು ವಿಚಾರಣೆ ಮಂಗಳವಾರ ನಡೆಯಲಿದ್ದು, ಈ ಸಂಬಂಧ ಆತನ ವಿರುದ್ಧ ಎಫ್‌ಬಿಐ ಸಲ್ಲಿಸಿರುವ ಹೊಸ ಸಾಕ್ಷ್ಯಗಳ ಪಟ್ಟಿಯಲ್ಲಿ ಭಾರತದ ಮೇಲೆ ದಾಳಿಗೆ ರೂಪಿಸಲಾಗಿದ್ದ ಹೊಸ ಮೂರು ಷಡ್ಯಂತ್ರಗಳನ್ನು ಸೇರಿಸಲಾಗಿದೆ.

ಈ ಹಿಂದೆ ದೆಹಲಿಯಲ್ಲಿನ ರಾಷ್ಟ್ರೀಯ ರಕ್ಷಣಾ ಕಾಲೇಜು ಲಷ್ಕರ್ ಹಿಟ್ ಲಿಸ್ಟಿನಲ್ಲಿದೆ ಎಂದು ಎಫ್‌ಬಿಐ ಹೇಳಿತ್ತು.

2009ರ ಸೆಪ್ಟೆಂಬರ್ 7ರಂದು ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಜತೆ ರಾಣಾ ನಡೆಸಿದ ಸಂಭಾಷಣೆಯಲ್ಲಿ ಭಾರತದಲ್ಲಿನ ಸೋಮನಾಥ ದೇವಸ್ಥಾನ, ಡೆನ್ಮಾರ್ಕ್, ಬಾಲಿವುಡ್ (ಸಿನಿಮಾ ಉದ್ಯಮ) ಮತ್ತು ಶಿವಸೇನೆಯ (ಹಿಂದೂರಾಷ್ಟ್ರ ಕಲ್ಪನೆಯ ಭಾರತದ ರಾಜಕೀಯ ಪಕ್ಷ) ಮೇಲೆ ದಾಳಿ ನಡೆಸುವ ಪ್ರಸ್ತಾಪಗಳಿವೆ ಎಂದ ಎಫ್‌ಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಿಳಿಸಿದೆ.

ರಾಣಾನನ್ನು ಬಂಧಿಸಿದ ನಂತರ ನೀಡಿದ ಹೇಳಿಕೆಯಲ್ಲಿ ಆತ ಹೆಡ್ಲಿ ಜತೆಗಿನ ತನ್ನ ಮಾತುಕತೆಯನ್ನು ಸಮರ್ಥಿಸಿಕೊಳ್ಳುವ ವಿಫಲ ಯತ್ನ ನಡೆಸಿದ್ದಾನೆ. ತಾನು ಭಾರತದಲ್ಲಿನ ಉದ್ಯಮದ ಕುರಿತಷ್ಟೇ ಮಾತನಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಾರತದ ಮೇಲೆ ದಾಳಿ ಯೋಜನೆ ರೂಪಿಸುವ ಉಗ್ರಗಾಮಿ ಸಂಘಟನೆಯನ್ನು ಶ್ಲಾಘಿಸುವ ವ್ಯಕ್ತಿಗೆ ಭಾರತದ ದೇವಸ್ಥಾನಗಳು ಅಥವಾ ಹಿಂದೂ ರಾಷ್ಟ್ರೀಯ ಪಕ್ಷವು ಹೇಗೆ ಉದ್ಯಮ ಸಹಕಾರಿಯಾಗುತ್ತದೆ ಎಂದು ಎಫ್‌ಬಿಐ ತನ್ನ ಅಚ್ಚರಿ ವ್ಯಕ್ತಪಡಿಸಿದೆ.

ರಾಣಾ, ಹೆಡ್ಲಿ ಮತ್ತು ಪಾಶಾ ಎಂಬವರು ತಮ್ಮ ಮಾತುಕತೆ ಸಂದರ್ಭದಲ್ಲಿ 'ಬಿಸಿನೆಸ್' ಮತ್ತು ಇನ್ವೆಸ್ಟ್‌ಮೆಂಟ್ಸ್ ಎಂಬ ಕೋಡ್ ವರ್ಡ್‌ಗಳನ್ನು ಬಳಸುತ್ತಿದ್ದುದನ್ನು ಕೂಡ ಎಫ್‌ಬಿಐ ತನ್ನ ಅಫಿದಾವಿತ್‌ನಲ್ಲಿ ತಿಳಿಸಿದೆ.

ಪಾಕಿಸ್ತಾನ ಮೂಲದ ಅಮೆರಿಕನ್ ಶಂಕಿತ ಉಗ್ರ ಹೆಡ್ಲಿ ಮುಂಬೈ ಉಗ್ರರ ದಾಳಿಯ ರೂವಾರಿ. ಪಾಶಾ ಎಂಬುವವನು ಪಾಕಿಸ್ತಾನದ ಸೇನೆಯ ನಿವೃತ್ತ ಅಧಿಕಾರಿ. ಇವರೂ ಸೇರಿದಂತೆ ಇನ್ನೂ ಹಲವರು ದಾಳಿಯ ಸಂಚಿನಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ