ದೈಹಿಕ ಕಿರುಕುಳ: ಭಾರತೀಯ ದಂಪತಿಗೆ ಶಿಕ್ಷೆ

ಮಂಗಳವಾರ, 18 ಡಿಸೆಂಬರ್ 2007 (20:07 IST)
ಇಂಡೋನೇಶಿಯದ ಇಬ್ಬರು ಮಹಿಳೆಯರನ್ನು ಮನೆಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನೀಡಿದ್ದಲ್ಲದೇ ದಿನಕ್ಕೆ 18 ಗಂಟೆಗಳ ಕಾಲ ದುಡಿಸಿಕೊಂಡ ಆರೋಪದ ಮೇಲೆ ಭಾರತೀಯ ಸಂಜಾತ ಲಕ್ಷಾಧಿಪತಿ ದಂಪತಿಗೆ ನ್ಯಾಯಾಧೀಶರೊಬ್ಬರು ಶಿಕ್ಷೆ ವಿಧಿಸಿದ್ದಾರೆ.

51 ವರ್ಷದ ಮಹೇಂದ್ರ ಮುರಳಿಧರ ಸಬನಾನಿ ಮತ್ತು ಇಂಡೋನೇಶಿಯದಲ್ಲಿ ಹುಟ್ಟಿದ ವರ್ಷ ಮಹೇಂದ್ರ ಸಬನಾನಿ ಅವರ ವಿರುದ್ಧ ಅಕ್ರಮ ದುಡಿಮೆ, ಸಂಚು, ವಿದೇಶಿಯರಿಗೆ ಆಶ್ರಯ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ತೀರ್ಪನ್ನು ನ್ಯಾಯಾಧೀಶರು ಓದಿ ಹೇಳಿದ ಕೂಡಲೇ ದಂಪತಿಯ ಮಗಳು ಅಲ್ಲೇ ಪ್ರಜ್ಞೆತಪ್ಪಿ ಕುಸಿದುಬಿದ್ದಳೆಂದು ಗೊತ್ತಾಗಿದೆ.

ಸಬಾನಿ ದಂಪತಿಗೆ ನಾಲ್ವರು ಮಕ್ಕಳಿದ್ದು, ವಿಶ್ವವ್ಯಾಪಿ ಸುಗಂಧದ ವ್ಯವಹಾರವನ್ನು ಮನೆಯಿಂದಲೇ ಮಾಡುತ್ತಿದ್ದರು. ಅವರೀಗ ಸುಮಾರು 40 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಬಹುದೆಂದು ಅಂದಾಜು ಮಾಡಲಾಗಿದೆ.

ಸಬನಾನಿಗಳ ವಿರುದ್ಧ ಆರೋಪವು ಆಧುನಿಕ ಗುಲಾಮಗಿರಿಗೆ ಸಮನಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಇಂಡೋನೇಶಿಯದ ನಿರಕ್ಷುರಿ ಮಹಿಳೆಯರು 100ರಿಂದ 150 ಡಾಲರ್ ಸಂಬಳಕ್ಕಾಗಿ ಅಮೆರಿಕಕ್ಕೆ ಬಂದು, ಜೀತದಾಳುಗಳಂತೆ ಶ್ರೀಮಂತ ದಂಪತಿ ಕೈಕೆಳಗೆ ದುಡಿಯುತ್ತಿದ್ದು, ಎಲ್ಲ ಹಣವನ್ನು ಸ್ವದೇಶದ ಸಂಬಂಧಿಗಳಿಗೆ ಕಳಿಸಲಾಗುತ್ತಿತ್ತು ಎಂದು ಸಹಾಯಕ ಅಟಾರ್ನಿ ಮಾರ್ಕ್ ಲೆಸ್ಕೊ ವಾದ ಮುಗಿಸುತ್ತಾ ಹೇಳಿದರು.

ಮಹಿಳೆಯೊಬ್ಬಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವಳಿಗೆ ಉಗ್ರಸ್ವರೂಪದ ಕ್ರೂರ ಚಿತ್ರಹಿಂಸೆಗೆ ಗುರಿಪಡಿಸಲಾಯಿತು ಎಂದು ಅವರು ಹೇಳಿದ್ದಾರೆ. ತಡವಾಗಿ ನಿದ್ದೆಮಾಡುವುದು ಅಥವಾ ಆಹಾರವನ್ನು ಕದ್ದ ತಪ್ಪಿಗಾಗಿ ಕೊಡೆಗಳಿಂದ, ದೊಣ್ಣೆಗಳಿಂದ ಥಳಿಸುವುದು, ಚಾಕುಗಳಿಂದ ತಿವಿಯುವುದು, ಮೆಟ್ಟಿಲನ್ನು ಹತ್ತಿಇಳಿಯುವಂತೆ ಮಾಡುವುದು ಮುಂತಾದ ಕ್ರೂರ ಶಿಕ್ಷೆಗೆ ಮನೆಸೇವಕಿಯರು ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ