ನನ್ನ ಹತ್ಯೆ ಮಾಡ್ಬೇಡಿ, ಬದಲಾಗಿ ಚಿನ್ನ, ಹಣ ತಗೊಳ್ಳಿ: ಗಡಾಫಿ ಪ್ರಾಣಭಿಕ್ಷೆ

ಭಾನುವಾರ, 23 ಅಕ್ಟೋಬರ್ 2011 (12:25 IST)
PTI
ಪ್ಲೀಸ್...ನನ್ನ ಕೊಲ್ಲಬೇಡಿ...ನನ್ನ ಜೀವಕ್ಕೆ ಬದಲಾಗಿ ನಿಮಗೆ ಏನು ಬೇಕು ಹೇಳಿ. ಚಿನ್ನ, ಹಣ ಏನು ಬೇಕಾದ್ರೂ ಕೇಳಿ...ಹೀಗೆ ಪ್ರಾಣಭಿಕ್ಷೆ ಬೇಡಿದಾತ ಬೇರಾರು ಅಲ್ಲ 42 ವರ್ಷಗಳ ಕಾಲ ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿ! ತನ್ನ ಪ್ರಾಣಪಕ್ಷಿ ಹಾರಿಹೋಗುವ ಅಂತಿಮ ಕ್ಷಣದಲ್ಲಿ ಈ ರೀತಿ ಅಂಗಲಾಚಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬ ಬಹಿರಂಗಪಡಿಸಿದ್ದಾನೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಾಷ್ಟ್ರೀಯ ಸಂಧಿಕಾಲ ಮಂಡಳಿ(ಎನ್‌ಟಿಸಿ), ನ್ಯಾಟೋ ಮತ್ತು ಅಮೆರಿಕ ಮಿತ್ರ ಪಡೆಗಳ ಯೋಧರು ಜಂಟಿಯಾಗಿ ಗಡಾಫಿ ಪಡೆಗಳ ಮೇಲೆ ಗುರುವಾರ ದಾಲಿ ನಡೆಸುತ್ತಾ, ತನ್ನ ತವರು ಪಟ್ಟಣ ಸಿದ್ರಾದ ರಸ್ತೆ ಅಡಿಯ ಸಿಮೆಂಟ್ ಕೊಳವೆಯೊಳಗೆ ಅಡಗಿ ಕುಳಿತಿದ್ದ ಈ ಪದಚ್ಯುತ ನಾಯಕನನ್ನು ಇಲಿಯನ್ನ ಬಿಲದಿಂದ ಹೊರಗೆಳೆದು ಹತ್ಯೆ ಮಾಡುವ ಸಂದರ್ಭದಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ನಿಮಗೆ ಏನು ಬೇಕು ಅದನ್ನು ಕೊಡುತ್ತೇನೆ ಎಂದು ಅಂಗಲಾಚಿಕೊಂಡಿದ್ದ ಎಂದು ಸಿರ್ಟೆಯಲ್ಲಿ ಕಾರ್ಯಾಚರಿಸಿದ್ದ ಬ್ರಿಗೇಡ್ ಕಮಾಂಡರ್ 28 ವರ್ಷದ ಹಮ್ಮಾದ್ ಮುಫ್ತಿ ಅಲಿ ವಿವರಿಸಿದ್ದಾನೆ.

ಕೊಳವೆಯಲ್ಲಿ ಅಡಗಿ ಕುಳಿತಿದ್ದ ಗಡಾಫಿಯನ್ನು ಹೊರಗೆಳೆದು ಹತ್ಯೆ ಮಾಡುವ ಕ್ಷಣದಲ್ಲಿ, ತಡೆಯಿರಿ ನನ್ನ ಕೊಲ್ಲಬೇಡಿ, ನನ್ನ ಜೀವಕ್ಕೆ ಬದಲಾಗಿ ನಿಮಗೆ ಏನು ಬೇಕು ಎಂದು ಕೇಳಿದ್ದ. ಆದರೆ ಅಷ್ಟರಲ್ಲಿ 69 ವರ್ಷದ ಗಡಾಫಿ ದೇಹ ಹೊಡೆತದಿಂದ ಜರ್ಜರಿತವಾಗಿ ರಕ್ತದಿಂದ ತೊಯ್ದು ಹೋಗಿತ್ತು. ಆತನ ಯಾವ ಕೋರಿಕೆಯನ್ನು ಲಕ್ಷಿಸದೆ ಹತ್ಯೆಗೈಯಲಾಯಿತು ಎಂದು ಮುಫ್ತಿ ತಿಳಿಸಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ.

ಉತ್ತಮ ಮುಸ್ಲಿಮ್ ಆಗಿದ್ದರೆ ಆತ ಸಾಯುವ ಮುನ್ನ ತಾನು ಮಾಡಿದ್ದ ತಪ್ಪಿಗೆ ಪ್ರಾಯಶ್ಚಿತ್ತ ಪಟ್ಟು ಕೊನೆಯುಸಿರೆಳೆಯುತ್ತಿದ್ದ. ಆದರೆ ಗಡಾಫಿ ಇನ್ನೂ ಬದುಕುವ ಸಲುವಾಗಿ ಚಿನ್ನ ಮತ್ತು ಹಣ ನೀಡುವ ಆಮಿಷ ಒಡ್ಡಿದ್ದ ಎಂದು ಪತ್ರಿಕೆ ಆತನ ಬಗ್ಗೆ ವಿಶ್ಲೇಷಣೆ ಮಾಡಿದೆ.

ಏತನ್ಮಧ್ಯೆ ಗಡಾಫಿ ಸಾವನ್ನು ಖಚಿತಪಡಿಸಿದ್ದ ಹಂಗಾಮಿ ಪ್ರಧಾನಿ ಮಹಮದ್ ಜಿಬ್ರಿಲ್, ತೈಲ ಶ್ರೀಮಂತಿಕೆಯ ಈ ಉತ್ತರ ಆಫ್ರಿಕಾ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮಾದರಿ ಚುನಾವಣೆ ನಡೆದು ಆಯ್ಕೆಯಾಗುವ ಹೊಸ ನಾಯಕನಿಗೆ ಹಾದಿ ಮಾಡಿಕೊಡಲು ತಾನು ಪದವಿ ತ್ಯಾಗ ಮಾಡಿ ಮಾರ್ಗದರ್ಶನ ಮಾಡುವುದಾಗಿ ಹೇಳಿದ್ದಾರೆ. ಹೊಸ ಸರ್ಕಾರ ರಚನೆ ಎನ್‌ಟಿಸಿಯ ಹೊಣೆಯಾಗಿದ್ದು, ದೇಶದ ಐಕ್ಯತೆಗಾಗಿ ಎಲ್ಲರೂ ಭಿನ್ನಮತ ತ್ಯಜಿಸಬೇಕೆಂದು ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ