ನಿಷೇಧ ಉಲ್ಲಂಘನೆ; ನಾಗಾಲೆಂಡ್ ಸಚಿವ ನೇಪಾಳದಲ್ಲಿ ಸೆರೆ

ಬುಧವಾರ, 30 ಜೂನ್ 2010 (12:57 IST)
ಭಾರತದ 1000 ಮತ್ತು 500 ರೂಪಾಯಿ ನೋಟುಗಳಿಗೆ ನಿಷೇಧವಿರುವ ನೇಪಾಳದಲ್ಲಿ ನಾಗಾಲೆಂಡ್ ಗೃಹ ಸಚಿವರು ಸಿಕ್ಕಿ ಬಿದ್ದಿದ್ದಾರೆ. ಈ ಮೌಲ್ಯದ ನೋಟುಗಳನ್ನು ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಅವರನ್ನು ಕಾಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.

ಸಚಿವರಿಗೆ ನೇಪಾಳದಲ್ಲಿ ಭಾರತದ ನಿರ್ದಿಷ್ಟ ನೋಟುಗಳಿಗೆ ನಿಷೇಧವಿರುವುದು ಅರಿವಿರಲಿಲ್ಲ. ಸಚಿವರನ್ನು ಬಂಧಿಸಿದ ವಿಚಾರವನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇಮ್ಕಾಂಗ್ ಇಚೆನ್ ಎಂಬವರೇ ಬಂಧಿತ ಗೃಹ ಸಚಿವರು. ನಾಗಾಲೆಂಡ್ ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಅಬೂ ಮೆಹ್ತಾರವರ ಪ್ರಕಾರ, ಹೆಚ್ಚಿನ ಭಾರತೀಯರು ಈ ನಿಷೇಧದ ಕುರಿತು ಅರಿವು ಹೊಂದಿಲ್ಲದೆ ಇರುವುದರಿಂದ ಸಮಸ್ಯೆ ಎದುರಿಸುತ್ತಿರುವುದು ಸಾಮಾನ್ಯವಾಗಿದೆ ಎಂದಿದ್ದಾರೆ.

ಸಚಿವರು ತನ್ನ ಜತೆ ಎಷ್ಟು ಹಣವನ್ನು ಕೊಂಡೊಯ್ದಿದ್ದರು ಎಂಬ ಬಗ್ಗೆ ನೇಪಾಳ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸರಕಾರಿ ಮೂಲಗಳ ಪ್ರಕಾರ ಅವರಲ್ಲಿ ಒಂಬತ್ತು ಲಕ್ಷ ರೂಪಾಯಿ ಹಣವಿತ್ತು.

ಸಚಿವರ ಬಂಧನವನ್ನು ನಾಗಾಲೆಂಡ್ ಸರಕಾರವು ಖಚಿತಪಡಿಸಿದೆ. ತನ್ನ ಕುಟುಂಬದೊಂದಿಗೆ ರಜಾದಿನ ಕಳೆಯಲು ನೇಪಾಳಕ್ಕೆ ಹೋಗಿದ್ದ ಸಚಿವರು ಬಂಧನಕ್ಕೊಳಗಾಗಿದ್ದಾರೆ. ಅವರು ಒಂಬತ್ತು ಲಕ್ಷ ರೂಪಾಯಿಗಳನ್ನು ಹೊಂದಿದ್ದರು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಲಾಲ್ತರಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ