ನೇಪಾಳ ಮತ್ತೆ ಹಿಂದೂ ರಾಷ್ಟ್ರವಾಗಲಿ: ಪ್ರತಿಭಟನೆ

ಬುಧವಾರ, 23 ಜೂನ್ 2010 (12:04 IST)
ನೇಪಾಳವನ್ನು ಮತ್ತೆ ಹಿಂದೂ ದೇಶವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಯೊಂದು ಕರೆ ನೀಡಿರುವ ಎರಡು ದಿನಗಳ ಬಂದ್‌ನಿಂದಾಗಿ ಪಶ್ಚಿಮ ನೇಪಾಳದಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಕೂಡ ಡಾಂಗ್, ಸಲ್ಯನ್, ರುಕುಂ, ರೋಲ್ಪಾ ಮತ್ತು ಪಯುತಾನ್ ಜಿಲ್ಲೆಯ ವಾಣಿಜ್ಯ ಮಳಿಗೆಗಳು, ಶಾಲಾ ಕಾಲೇಜುಗಳು, ಮಾರುಕಟ್ಟೆಗಳು ಮುಚ್ಚಿದ್ದವು.

ಬಂದ್‌ಗೆ ಕರೆ ಕೊಟ್ಟದ್ದ ಭೀಷ್ಮ ಏಕ್ತ್ ಪರಿಷತ್ ಸಂಘಟನೆಯ ಕಾರ್ಯಕರ್ತರು ಕೆಲವು ಕಡೆ ಬಲವಂತವಾಗಿ ವಾಣಿಜ್ಯ ಮಳಿಗೆಗಳ ಬಾಗಿಲು ಹಾಕಿಸುತ್ತಿದ್ದ ದೃಶ್ಯ ಕಂಡುಬಂತು.ಇಡೀ ಜಗತ್ತಿನಲ್ಲಿ ನೇಪಾಳ ಮಾತ್ರ ಹಿಂದೂ ದೇಶವಾಗಿದ್ದು, ಆ ನಿಟ್ಟಿನಲ್ಲಿ ನೇಪಾಳವನ್ನು ಮತ್ತೆ ಹಿಂದೂ ದೇಶ ಎಂದು ಘೋಷಿಸಬೇಕೆಂದು ಸಂಘಟನೆ ಬಲವಾಗಿ ಒತ್ತಾಯಿಸಿದೆ.

ನೇಪಾಳ ದೊರೆ ಜ್ಞಾನೇಂದ್ರ ಅವರನ್ನು ಬಲವಂತದಿಂದ ಅಧಿಕಾರದಿಂದ ಮುಕ್ತಗೊಳಿಸಿ, ರಾಜಪ್ರಭುತ್ವ ಅಂತ್ಯಗೊಂಡ ನಂತರ 2006ರಲ್ಲಿ ನೇಪಾಳವನ್ನು ಪ್ರಜಾಸತ್ತಾತ್ಮಕ ದೇಶ ಎಂದು ಘೋಷಿಸಲಾಗಿತ್ತು.

ಆದರೆ ಕಳೆದ ತಿಂಗಳು ನಡೆದ ಸಂಸತ್ ಅಧಿವೇಶನದಲ್ಲಿ ಹೊಸ ಸಂವಿಧಾನವನ್ನು ಜಾರಿಗೆ ತರುವಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ.

ವೆಬ್ದುನಿಯಾವನ್ನು ಓದಿ