ಪಶುಪತಿನಾಥ ದೇವಳ ಪ್ರೇಮಿಗಳ ಪಾರ್ಕ್ ಅಲ್ಲ:ನೇಪಾಳ

ಬುಧವಾರ, 2 ಫೆಬ್ರವರಿ 2011 (15:04 IST)
ನೇಪಾಳದ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದ ಆವರಣದಲ್ಲಿ ಪ್ರೇಮಿಗಳ ಪ್ರಣಯಾಸಕ್ತ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಮುಂದಾಗಿರುವ ದೇವಳದ ಆಡಳಿತ ಮಂಡಳಿ, ಆ ರೀತಿ ನಡೆದುಕೊಳ್ಳುವ ಪ್ರೇಮಿಗಳಿಗೆ ದಂಡ ವಿಧಿಸುವ ಯೋಜನೆಯನ್ನು ಜಾರಿಗೆ ತರುವುದಾಗಿ ತಿಳಿಸಿದೆ.

'ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಶುಪತಿನಾಥ ದೇವಾಲಯದ ಪ್ರದೇಶದಲ್ಲಿ ಪ್ರೇಮಿಗಳ ಕಾಮಪ್ರಚೋದಿತ ಚಟುವಟಿಕೆಗಳನ್ನು ನಿಷೇಧಿಸುವುದಾಗಿ' ಪಶುಪತಿ ಏರಿಯ ಡೆವಲಪ್‌ಮೆಂಟ್ ಟ್ರಸ್ಟ್(ಪಿಎಡಿಟಿ)ನ ಅಧ್ಯಕ್ಷ ಸುಶೀಲ್.ಕೆ.ನಾಹತಾ ತಿಳಿಸಿದ್ದಾರೆ.

'ತಮ್ಮ ಮನಸ್ಸಿಗೆ ಬಂದಂತೆ ಪ್ರೇಮಿಗಳು ವರ್ತಿಸಲು ಇದೇನು ಗಾರ್ಡನ್ ಅಥವಾ ಸಾರ್ವಜನಿಕ ಪಾರ್ಕ್ ಅಲ್ಲ' ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪವಿತ್ರ ಸ್ಥಳದಲ್ಲಿ ಅಸಹಜವಾಗಿ ವರ್ತಿಸುವ ಪ್ರೇಮಿಗಳಿಗೆ ದಂಡ ವಿಧಿಸುವ ನೂತನ ಕಾಯ್ದೆಯನ್ನು ವಾರದೊಳಗೆ ಜಾರಿಗೆ ತರುವುದಾಗಿ ವಿವರಿಸಿದ್ದಾರೆ.

ಪಶುಪತಿನಾಥ ದೇವಾಲಯ ಬಾಗ್ಮತಿ ನದಿಯಿಂದ ಸುತ್ತುವರಿದಿದೆ. ಇದು ಹಿಂದೂಗಳ ಪುರಾತನ ಪವಿತ್ರವಾದ ಶಿವ ದೇವಾಲಯವಾಗಿದೆ. ಅಲ್ಲದೇ ಈ ದೇವಾಲಯ ಯುನೆಸ್ಕೋದ ವರ್ಲ್ಡ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿದೆ. ದೇವಾಲಯದ ಆವರಣವಾಗಲಿ ಅಥವಾ ಸ್ಲೆಸ್‌ಮಂಟಾಕ್ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳು ಮುತ್ತು ಕೊಡುವುದು, ತಬ್ಬಿಕೊಳ್ಳುವುದು ಕಂಡುಬಂದಲ್ಲಿ ಅಂತಹವರಿಗೆ 200ರಿಂದ 500 ರೂಪಾಯಿವರೆಗೆ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ