ಪಾಕಿಸ್ತಾನ: ಆಸ್ಪತ್ರೆಯಲ್ಲಿ ಕ್ರೈಸ್ತ ನರ್ಸ್‌ಗಳಿಗೆ ವಿಷಪ್ರಾಶನ?

ಗುರುವಾರ, 2 ಆಗಸ್ಟ್ 2012 (13:23 IST)
PR
ಕರಾಚಿಯ ಸರ್ಕಾರಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಒಂಬತ್ತು ಕ್ರೈಸ್ತ ನರ್ಸ್‌ಗಳಿಗೆ ವಿಷಪ್ರಾಶನ ಮಾಡಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಕೃತ್ಯಕ್ಕೆ ಕಳವಳ ವ್ಯಕ್ತಪಡಿಸಿರುವ ಪಾಕಿಸ್ಥಾನದ ಕ್ರೈಸ್ತ ಸಮುದಾಯ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.

ಕರಾಚಿಯ ಸಿವಿಲ್‌ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಒಂಬತ್ತು ಕ್ರೈಸ್ತ ನರ್ಸ್‌ಗಳು ಭಾನುವಾರ ರಾತ್ರಿ ಚಹಾ ಕುಡಿದು ಬಳಿಕ ಅಸ್ವಸ್ಥರಾಗಿದ್ದಾರೆ. ಅನ್ಯಧರ್ಮೀಯರಾಗಿರುವ ಅವರಿಗೆ ಉದ್ದೇಶ ಪೂರ್ವಕವಾಗಿ ವಿಷ ಬೆರೆಸಿದ ಚಹಾ ಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.

ಸಹೋದ್ಯೋಗಿಯೊಬ್ಬರು ರಾತ್ರಿ 10.00 ಗಂಟೆಯ ಬಳಿಕ ಚಹಾ ತಯಾರಿಸಿ ಕೊಟ್ಟರು ಹಾಗೂ ಅದನ್ನು ಕುಡಿದ ಕೂಡಲೇ ಒಂಬತ್ತು ಮಂದಿ ಅಸ್ವಸ್ಥರಾದರು ಎಂದು ಓರ್ವ ನರ್ಸ್‌ ತಿಳಿಸಿದ್ದಾರೆ. ಮರುದಿನ ಪರಿಸ್ಥಿತಿ ಬಿಗಡಾಯಿಸಿ ಎಲ್ಲ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುಸ್ಲಿಮ್‌ ಸಿಬಂದಿ ರಮ್ಜಾನ್‌ ಉಪವಾಸ ಮಾಡುತ್ತಿರುವಾಗ ಉಳಿದ ಧರ್ಮದವರು ತಿನ್ನುವುದರಿಂದ ಕ್ರೈಸ್ತ ನರ್ಸ್‌ಗಳಿಗೆ ಕೊಟ್ಟ ಚಹಾಕ್ಕೆ ವಿಷ ಬೆರೆಸಲಾಗಿದೆ ಎನ್ನುವ ವದಂತಿ ಹರಡಿದೆ.

ಆದರೆ ಸ್ಥಳೀಯ ಸಂಸದ ಸಲೀಮ್‌ ಖೋಖರ್‌ ಈ ಆರೋಪವನ್ನು ಅಲ್ಲಗಳೆದಿದ್ದು, ಮುಸ್ಲಿಮರು ರಾತ್ರಿ ಹೊತ್ತು ಉಪವಾಸ ಮಾಡುವುದಿಲ್ಲವಾದುದರಿಂದ ಇವೆಲ್ಲ ನಿರಾಧಾರ ಪುಕಾರುಗಳು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ