ಪಾಕ್: ಅಬೋಟಾಬಾದ್ ಈಗ ಪ್ರವಾಸಿಗರ ನೆಚ್ಚಿನ ತಾಣ!

ಸೋಮವಾರ, 16 ಮೇ 2011 (16:34 IST)
ಅಮೆರಿಕದ ವಿಶೇಷ ಸೇನಾಪಡೆ ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದ ಅಬೋಟಾಬಾದ್ ಈ ವರ್ಷ ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ ಎಂಬುದು ಅಲ್ಲಿನ ವ್ಯಾಪಾರಸ್ಥರ ನಿರೀಕ್ಷೆಯಾಗಿದೆ. ಅಲ್ಲದೇ ಹಿತವಾದ ವಾತಾವರಣ ಕೂಡ ಅದಕ್ಕೆ ಪೂರಕವಾಗಿರುವುದರಿಂದ ಬಂಪರ್ ಪ್ರವಾಸಿಗರು ಬರಲಿದ್ದಾರಂತೆ.

ಇಸ್ಲಾಮಾಬಾದ್‌ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಅಬೋಟಾಬಾದ್ ಪ್ರಶಾಂತ ವಾತಾವರಣ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಗಿರಿಧಾಮ, ಆಹ್ಲಾದಕರ ವಾತಾವರಣ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು. ಅಷ್ಟೇ ಅಲ್ಲ ಪಾಕಿಸ್ತಾನದ ಪ್ರವಾಸಿ ವೆಬ್‌ಸೈಟ್‌ನಲ್ಲಿಯೂ ಅಬೋಟಾಬಾದ್ ಪ್ರಸಿದ್ಧ ಬೇಸಿಗೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆದರೆ ಲಾಡೆನ್ ಹತ್ಯೆಯ ನಂತರ ಅಬೋಟಾಬಾದ್‌ನಲ್ಲಿನ ವ್ಯಾಪಾರೋದ್ಯಮಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ಈ ಬಾರಿ ಆತನ ಹತ್ಯೆಗೈದ ಸ್ಥಳವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ ಎಂಬ ನಿರೀಕ್ಷೆ ನಮ್ಮದಾಗಿದೆ ಎನ್ನುತ್ತಾರೆ ಅಬೋಟಾಬಾದ್‌ನ ಸ್ಥಳೀಯರು.

ಅಮೆರಿಕ ಪಡೆಯ ದಾಳಿಯಿಂದಾಗಿ ಪ್ರವಾಸೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ನಮ್ಮದು. ಲಾಡೆನ್ ಹತ್ಯೆ ನಡೆದ ಸ್ಥಳ ನೋಡುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಅಜಾಮ್ ಖಾನ್ ವಿವರಿಸಿದ್ದಾರೆ.

ಅಬೋಟಾಬಾದ್ ನಗರ ಸಹಜಸ್ಥಿತಿಯಲ್ಲಿದೆ ಮತ್ತು ಇದು ಈಗಲೂ ಶಾಂತಿಪ್ರಿಯ ನಗರ ಇದಕ್ಕೂ ಮೊದಲು ಕೂಡ ಅಷ್ಟೇ. ಅಬೋಟಾಬಾದ್ ಮಿಲಿಟರಿ ತರಬೇತಿ ಕೇಂದ್ರಗಳಿಗೆ ಹೆಸರುವಾಸಿಯಾದದ್ದು. ಆದರೆ ಇಲ್ಲಿನ ಗುಡ್ಡಗಾಡು, ರಮಣೀಯ ಪ್ರದೇಶ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ