ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!

ಭಾನುವಾರ, 28 ಫೆಬ್ರವರಿ 2010 (17:28 IST)
PTI
ಭಾರತ ಹಾಗೂ ಪಾಕಿಸ್ತಾನ ನಡುವಿನ ವಿವಾದದ ಮಾತುಕತೆಯಲ್ಲಿ ಸೌದಿ ಅರೇಬಿಯಾ ಭಾರತದ ಪರ ಅತ್ಯುತ್ತಮ ಸಂಧಾನಕಾರನಾಗಿ ಪಾತ್ರ ವಹಿಸಬಹುದು ಎನ್ನುವ ಮೂಲಕ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಮತ್ತೊಮ್ಮೆ ವಿವಾದಕ್ಕೆ ಗ್ರಾಸರಾಗಿದ್ದಾರೆ.

ಆದರೆ, ಹೀಗೆ ಅವರು ಹೇಳಿಕೆ ನೀಡಿದ ಕೆಲವೇ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತ ಹಾಗೂ ಪಾಕ್ ನಡುವಿನ ಸಂಧಾನಕ್ಕೆ ಯಾವುದೇ ಮಧ್ಯಸ್ಥಿಕೆಯ ಸಂಭವ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ ಹಾಗೂ ಪಾಕ್ ಸಂಬಧಗಳ ಕುರಿತು ಭಾರತ ಮಧ್ಯಸ್ಥಿಕೆಯ ಸಲಹೆಯ ವಿರುದ್ಧ ಧೋರಣೆಯನ್ನು ಹೊಂದಿದೆ ಎಂದೂ ಸಚಿವಾಲಯ ಈ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಭಾರತ ಪಾಕ್ ಸಂಬಂಧದಲ್ಲಿ ಭಾರತ ಸೌದಿ ಅರೇಬಿಯಾದ ಬೆಂಬಲ ಬಯಸುತ್ತದೆಯೇ ಎಂಬ ಪ್ರಶ್ನೆಗೆ ಭಾರತೀಯ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಶಶಿ ತರೂರ್, ಸೌದಿ ಅರೇಬಿಯಾ ಪಾಕ್ ಜೊತೆಗೆ ಅನಾದಿ ಕಾಲದ ಅತ್ಯುತ್ತಮ ಸಂಬಂಧ ಹೊಂದಿದೆ. ಹೀಗಾಗಿ ಸೌದಿ ಅರೇಬಿಯಾ ಭಾರತದ ಪರ ಅತ್ಯುತ್ತಮ ಸಂಧಾನಕಾರನಾಗಬಹುದು ಎಂದು ಹೇಳಿದರು.

ಸೌದಿ ಅರೇಬಿಯಾಕ್ಕೆ ಅಲ್ ಖೈದಾ ವಿರುದ್ಧ ತನ್ನದೇ ವಿವಾದಗಳನ್ನು ಹೊಂದಿದೆ. ನಾವು ಭಾರತದ ವತಿಯಿಂದ ಕೆಲವು ಇಂತಹ ವಿಷಯಗಳ ಕುರಿತು ಮಾತುಕತೆ ನಡೆಸಬೇಕಿದೆ. ಈಗಾಗಲೇ ಭಯೋತ್ಪಾದನೆ ಕೂಡಾ ಅಫ್ಘಾನಿಸ್ತಾನದಿಂದ ಇರಾಕ್, ಲೆಬನಾನ್, ಪಯಾಲೆಸ್ತೀನ್, ಯೆಮೆನ್‌ಗಳಾಚೆಯೂ ವಿಸ್ತರಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಮನಹೋನ್ ಸಿಂಗ್ ಈಗಾಗಲೇ ಮೂರು ದಿನಗಳ ರಿಯಾದ್ ಪ್ರವಾಸದಲ್ಲಿದ್ದು, ಭಯೋತ್ಪಾದನೆ ನಿಗ್ರಹಕ್ಕಾಗಿ ಎರಡು ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ