ಮಲೇಶ್ಯ ನೂತನ ಪ್ರಧಾನಿಯಾಗಿ ನಜೀಬ್‌ ರಜಾಕ್‌ ಪ್ರಮಾಣ

ಮಂಗಳವಾರ, 7 ಮೇ 2013 (09:36 IST)
PR
PR
ಮಲೇಶ್ಯದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಳುವ ಬರಿಸಾನ್‌ ನ್ಯಾಷನಲ್‌ ಮೈತ್ರಿಕೂಟ ಬಹುಮತ ಗಳಿಸಿದ್ದು, ನಜೀಬ್‌ ರಜಾಕ್‌ (59) ದ್ವಿತೀಯ ಬಾರಿಗೆ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಭಾನುವಾರದ ಚುನಾವಣೆಯಲ್ಲಿ ಶೇ. 80 ಮತದಾನವಾಗಿತ್ತು. ಆಳುವ ಮೈತ್ರಿಕೂಟ ಸತತ 56 ವರ್ಷಗಳಿಂದ ದೇಶದ ಆಳ್ವಿಕೆ ನಡೆಸುತ್ತಿದೆ. ಇದೇ ವೇಳೆ, ಸಾರ್ವತ್ರಿಕ ಚುನಾವಣೆಯಲ್ಲಿ ಮಲೇಶ್ಯನ್‌ ಇಂಡಿಯನ್‌ ಕಾಂಗ್ರೆಸ್‌ (ಎಂಐಸಿ) ಉತ್ತಮ ನಿರ್ವಹಣೆ ತೋರುವುದೆಂದು ನಿರೀಕ್ಷಿಸಲಾಗಿತ್ತು. ಅದು ಕೇವಲ ನಾಲ್ಕು ಸ್ಥಾನಗಳನ್ನು ಗಳಿಸುವ ಮೂಲಕ ಸಾಧಾರಣ ನಿರ್ವಹಣೆಯನ್ನು ತೋರಿದೆ.

222 ಸದಸ್ಯರ ಸಂಸತ್ತಿನಲ್ಲಿ 133 ಸ್ಥಾನಗಳೊಂದಿಗೆ ನಜೀಬ್‌ ರಜಾಕ್‌ ನೇತೃತ್ವದ ಆಳುವ ಬರಿಸಾನ್‌ ನ್ಯಾಷನಲ್‌ ಮೈತ್ರಿಕೂಟ ಸರಳ ಬಹುಮತವನ್ನು ಗಳಿಸಿದೆ ಎಂದು ಚುನಾವಣಾ ಆಯೋಗದ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಖ್ಯೆ ಸರಕಾರ ರಚಿಸಲು ಅಗತ್ಯವಿರುವ ಸಂಖ್ಯೆಗಿಂತ 21 ಅಧಿಕವಾಗಿದೆ.

ಭಾನುವಾರ ನಡೆದ ಚುನಾವಣೆಯಲ್ಲಿ ಅನ್ವರ್ ಇಬ್ರಾಹಿಂ ಪಾಕತನ್‌ ರಾಕ್ಯಾತ್‌ ನೇತೃತ್ವದ ವಿಪಕ್ಷ ಒಕ್ಕೂಟ ಡಿಎಪಿ 89 ಸ್ಥಾನಗಳನ್ನು ಗಳಿಸಿದೆ. ಮಲೇಶ್ಯದಲ್ಲಿರುವ ಭಾರತೀಯ ಮೂಲದ ಹೆಚ್ಚಿನವರು ಆಳುವ ಬರಿಸಾನ್‌ ನ್ಯಾಷನಲ್‌ ಮೈತ್ರಿಕೂಟಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

ವೆಬ್ದುನಿಯಾವನ್ನು ಓದಿ