ಮುಂಬೈ ದಾಳಿ: ಉಗ್ರರಿಗೆ ಶಹಬ್ಬಾಸ್ ಹೇಳಿದ್ದ ರಾಣಾ!

ಮಂಗಳವಾರ, 15 ಡಿಸೆಂಬರ್ 2009 (13:25 IST)
ಕಳೆದ ವರ್ಷದ ಮುಂಬೈ ಭಯೋತ್ಪಾದನಾ ದಾಳಿಯ ಬಳಿಕ ಶಂಕಿತ ಉಗ್ರ ತಹಾವುರ್ ಹುಸೈನ್ ರಾಣಾ, ಲಷ್ಕರ್ ಇ ತೋಯ್ಬಾದ ಸದಸ್ಯರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಎಂದು ಅಮೆರಿಕಾ ಸರಕಾರಿ ವಕೀಲರು ಆರೋಪಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಸದಸ್ಯ 'ಎ' ಎಂದು ಹೆಸರಿಸಿರುವ 'ಖಾಲಿದ್ ಬಿನ್ ವಾಲಿದ್' ಎಂಬಾತನಿಗೆ 'ನನಗೆ ಸಂದೇಶವನ್ನು ರವಾನಿಸು' ಎಂದು ಮತ್ತೊಬ್ಬ ಪಿತೂರಿಗಾರ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿಗೆ ರಾಣಾ ಹೇಳಿದ್ದ ಎಂದು ಅಮೆರಿಕಾದ ವಕೀಲರು ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ಸಲ್ಲಿಸಿರುವ 10 ಪುಟಗಳ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ.

ಈ ವಿಶ್ವದಲ್ಲಿ ಅದ್ಭುತ ಸಾಹಸಕ್ಕೊಂದು ಪ್ರಶಸ್ತಿಯೆಂಬುದಿದ್ದಿದ್ದರೆ, ಈ ದಾಳಿಯೇ ಅದಕ್ಕೆ ಅರ್ಹವಾಗುತ್ತಿತ್ತು ಎಂದು ರಾಣಾ ಹೇಳಿದ್ದಾನೆ ಎನ್ನುತ್ತವೆ ಅಮೆರಿಕನ್ ದಾಖಲೆಗಳು. ಅಷ್ಟು ಹೊತ್ತಿನಲ್ಲಿ ರಾಣಾ ಮಾತಿಗೆ ಅಡ್ಡ ಬರುವ ಹೆಡ್ಲಿ, ತಾನು ಈಗಾಗಲೇ ಆ ಸಂದೇಶವನ್ನು ರವಾನಿಸಿದ್ದೇನೆ ಮತ್ತು 'ನಾನು (ಹೆಡ್ಲಿ) ನಿನ್ನ (ರಾಣಾ) ಹೆಸರನ್ನು ಆಗ ಪ್ರಸ್ತಾಪಿಸಿದ್ದೇನೆ' ಎನ್ನುತ್ತಾನೆ. ಆಗ ಪ್ರತಿಕ್ರಿಯಿಸುವ ರಾಣಾ, 'ಇದೊಂದು ಆತನಿಗೆ ಹೆಸರು ತರುವ ವಿಷಯ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಒಳ್ಳೆಯ ಕೆಲಸ ಮಾಡಿದ್ದೀರಿ... ಗುಡ್ ಜಾಬ್' ಎಂದು ತಿಳಿಸುತ್ತಾನೆ.

ಲಷ್ಕರ್ ಸದಸ್ಯ 'ಎ' ಗುರಿಗಳ ಬಗ್ಗೆ ದಾಳಿಕೋರರಿಗೆ ಗುರಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುತ್ತಿರುವಾಗ, ಹೆಡ್ಲಿ, ದಾಳಿಕೋರರ ತರಬೇತುದಾರನಾಗಿ ಇನ್ನೊಬ್ಬ ಲಷ್ಕರ್ ಉಗ್ರ ಅಬು ಖಹಾಫಾ ಎಂಬಾತನನ್ನು ಗುರುತಿಸುತ್ತಾನೆ. 'ಅಬು ಖಹಾಫಾನಿಂದ ತರಬೇತಿ ದೊರೆತಿದೆ. ಈ ಜಮಾತ್ (ಗುಂಪು) ಅವರನ್ನು ಸಮರ್ಥವಾಗಿ ತರಬೇತುಗೊಳಿಸುತ್ತಿದೆ' ಎಂದು ಹೆಡ್ಲಿ ಆ ಸಂದರ್ಭದಲ್ಲಿ ಶ್ಲಾಘಿಸಿದ್ದ.

ರಾಣಾ ಸ್ವತಃ ಹೇಳಿರುವ ಮಾತುಗಳು 170 ಅಮಾಯಕರನ್ನು ಕ್ರೂರವಾಗಿ ಕೊಲ್ಲುವುದನ್ನು ಬೆಂಬಲಿಸಿದ್ದು, ಇಲ್ಲಿ ಯಾವುದೇ ಅಹಿಂಸಾತ್ಮಕ ಮಾತುಗಳಿಲ್ಲ. ಇವು ರಾಣಾ ಒಬ್ಬ ಗಾಂಧಿಯಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ