ರಾಷ್ಟ್ರಾಧ್ಯಕ್ಷರಾಗಿ ಪರ್ವೇಜ್ ಮುಷರಫ್

ಗುರುವಾರ, 29 ನವೆಂಬರ್ 2007 (17:01 IST)
ಬುಧವಾರವಷ್ಟೇ 46 ವರ್ಷಗಳ ನಂತರ ಸೇನಾ ಸಮವಸ್ತ್ರಗಳನ್ನು ಕಳಚಿದ್ದ ಪಾಕ್ ಪರಮೋಚ್ಛ ನಾಯಕ ಪರ್ವೇಜ್ ಮುಷರಫ್, ಗುರುವಾರ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದರು.

ಪಾಕ್ ಇತಿಹಾಸದಲ್ಲಿ ಸೇನಾ ಅಧ್ಯಕ್ಷರೊಬ್ಬರು ರಾಷ್ಟ್ರಾಧ್ಯಕ್ಷರಾಗುತ್ತಿದ್ದು ಇದೇ ಮೊದಲ ಬಾರಿಯಾಗಿದ್ದು, ಪಾಕಿಸ್ತಾನ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಬ್ದುಲ್ ಹಮೀದ್ ದೋಗಾರ್ ಅವರು ಮುಷರಫ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನವನ್ನು ಬೋಧಿಸಿದರು.

ಪ್ರಮಾಣ ವಚನ ಸ್ವಿಕರಿಸಿದ ನಂತರ ಮಾತನಾಡಿದ ಅಧ್ಯಕ್ಷ ಮುಷರಫ್, ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಅಸ್ಫಾಕ್ ಖಯಾನಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ ಮುಷರಫ್, ಸೇನೆ ಸಂಪೂರ್ಣವಾಗಿ ತಮ್ಮ ಬೆಂಬಲಕ್ಕಿದೆ ಎಂದು ತಿಳಿಸಿದರು.

ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ರಾಷ್ಟ್ರವನ್ನು ಸಶಕ್ತಗೊಳಿಸುವುದಲ್ಲದೇ, ಆರ್ಥಿಕ ಸದೃಢತೆಯತ್ತ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ತಮ್ಮ ಎಂದಿನ ಗಾಂಭೀರ್ಯತೆಯಿಂದಲೇ ಇದ್ದ ಮುಷರಫ್, ಕಪ್ಪುಕೋಟನ್ನು ಧರಿಸಿ ಪ್ರಮಾಣವಚನ ಸ್ವಿಕರಿಸಿದ್ದು ವಿಶೇಷವಾಗಿತ್ತು.

ಪಾಕಿಸ್ತಾನ ಸೇನೆಯನ್ನು ಸಮರ್ಥಿಸಿಕೊಂಡ ಮುಷರಫ್, ಪಾಕ್ ಸೇನೆ ವಿಶ್ವದ ಅತ್ಯುತ್ತಮ ಸೇನಾಪಡೆಗಳಲ್ಲಿ ಒಂದಾಗಿದ್ದು, ಖಯಾನಿ ಅವರನ್ನು ಕಳೆದೆರಡು ದಶಕಗಳಿಂದ ನೋಡುತ್ತಿದ್ದೇನೆ. ಅವರು ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆನ್ನುವ ಭರವಸೆ ತಮಗಿದೆ ಎಂದು ಮುಷರಫ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ