ರೆಹಮಾನ್ ಮಲಿಕ್ ಪಾಕಿಸ್ತಾನದ ದೊಡ್ಡ ಶತ್ರು: ಸಚಿವ ಮಿರ್ಜಾ

ಸೋಮವಾರ, 29 ಆಗಸ್ಟ್ 2011 (18:01 IST)
ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವಕಾಶವಾದಿ, ಆತ ಪಾಕಿಸ್ತಾನದ ದೊಡ್ಡ ಶತ್ರು...ಇದು ಸ್ವತಃ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ವಿವಾದಿತ ಹಿರಿಯ ಸಚಿವ ಜುಲ್ಫಿಕರ್ ಮಿರ್ಜಾ ವಾಗ್ದಾಳಿ ನಡೆಸಿದ ಪರಿ.

ಸಿಂಧ್ ಪ್ರಾಂತ್ಯದ ಹಿರಿಯ ಸಚಿವರಾಗಿರುವ ಮಿರ್ಜಾ, ತಮ್ಮ ಪ್ರಾಂತ್ಯದಲ್ಲಿ ಅರೆಸೇನಾ ಪಡೆ ಕಾರ್ಯಾಚರಣೆ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ತಮಗೆ 15 ದಿನಗಳ ಕಾಲ ಮುಕ್ತ ಅವಕಾಶ ಕೊಟ್ಟರೆ ತಾವು ಪರಿಸ್ಥಿತಿಯನ್ನು ಹತೋಟಿಗೆ ತಂದು ಶಾಂತ ಸ್ಥಿತಿಗೆ ತರುವುದಾಗಿಯೂ ತಿಳಿಸಿದ್ದರು.

ಏತನ್ಮಧ್ಯೆ ರೆಹಮಾನ್ ಮಲಿಕ್ ವಿರುದ್ಧ ಅಸಮಾಧಾನಗೊಂಡಿರುವ ಮಿರ್ಜಾ ತಮ್ಮ ಕ್ಯಾಬಿನೆಟ್ ಹುದ್ದೆಗೆ ಮತ್ತು ಪಕ್ಷದ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ. ಕರಾಚಿಯಲ್ಲಿ ತೀವ್ರವಾದ ಹಿಂಸಾಚಾರ ಸಂಭವಿಸಲು ಮಲಿಕ್ ಕೈವಾಡವೇ ಕಾರಣ ಎಂದು ಕಿಡಿಕಾರಿರುವ ಅವರು, ಆತನೊಬ್ಬ ಅಪ್ಪಟ ಸುಳ್ಳುಗಾರ ಎಂದು ಆರೋಪಿಸಿದ್ದಾರೆ.

ಮಲಿಕ್ ಅವರು ಕರಾಚಿಯಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಕರಾಚಿಯಲ್ಲಿನ ಪರಿಸ್ಥಿತಿ ಹದಗೆಡಲು ರೆಹಮಾನ್ ಮಲಿಕ್ ಕಾರಣ ಎಂಬ ಬಗ್ಗೆ ಸರ್ಕಾರಕ್ಕೆ ಪುರಾವೆ ನೀಡಲೂ ಸಿದ್ದ ಎಂಬುದಾಗಿಯೂ ಸವಾಲು ಹಾಕಿದ್ದಾರೆ.

ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ನಿಕಟವರ್ತಿಯಾಗಿರುವ ಮಿರ್ಜಾ ಸದಾ ಒಂದಲ್ಲಾ ಒಂದು ಕಾರಣದಿಂದ ವಿವಾದಿತ ವ್ಯಕ್ತಿಯಾಗಿದ್ದಾರೆ. ಈ ಮೊದಲು ಪಿಪಿಪಿ ಮೈತ್ರಿಕೂಟದ ಮುತಾಹಿದಾ ಖ್ವಾಮಿ ಚಳವಳಿ ಪಕ್ಷದ ವಿರುದ್ಧವೂ ಟೀಕಿಸಿ ವಿವಾದಕ್ಕೆ ಈಡಾಗಿದ್ದರು.

ವೆಬ್ದುನಿಯಾವನ್ನು ಓದಿ