ವಿದಾಯದ ಮುತ್ತು...ತಂದಿತು ಕುತ್ತು...

ಗುರುವಾರ, 13 ಮಾರ್ಚ್ 2014 (15:19 IST)
PTI
ಆಮೆಯ ತುಟಿಗೆ ವಿದಾಯದ ಮುತ್ತು ನೀಡಲು ಪ್ರಯತ್ನಿಸಿ, ಅದರಿಂದ ಕಚ್ಚಿಸಿಕೊಂಡ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಮೈಕ್ರೋಬ್ಲಾಗಿಂಗ್ ಸೈಟೊಂದು ಆತನ ತುಟಿಗೆ ಆಮೆ ಕಚ್ಚಿಕೊಂಡು ನೇತಾಡುತ್ತಿರುವ ಚಿತ್ರವನ್ನು ಪ್ರಕಟಿಸಿದೆ.

ಫುಜಿಯನ್ ಪ್ರಾಂತ್ಯದ ನಿವಾಸಿಯಾಗಿದ್ದ ಆತ ತಾನು ಸಾಕಿದ್ದ ಆಮೆಯನ್ನು ಕಾಡಿನಲ್ಲಿ ಬಿಡುಗಡೆ ಮಾಡಿ ಬರಲು ತಯಾರಾದ. ಪ್ರೀತಿಯಿಂದ ಆದರ ತುಟಿಗೆ ಆತ ಮುತ್ತು ನೀಡಲು ಹೋದ. ಅನಿರೀಕ್ಷಿತವಾದ ಪ್ರಕ್ರಿಯೆಗೆ ಗಾಬರಿಯಾದ ಆಮೆ ಆತನ ತುಟಿಗಳೆರಡನ್ನು ಬಿಗಿಯಾಗಿ ಕಚ್ಚಿ ಹಿಡಿಯಿತು.

ತನ್ನ ಪ್ರಬಲವಾದ, ಕೊಕ್ಕಿನ ತರಹದ ದವಡೆಗಳಿಂದ ಆತನ ತುಟಿಗಳೆರಡನ್ನು ಕಚ್ಚಿ ಹಿಡಿದ ಪ್ರಾಣಿ ತನ್ನ ಹಿಡಿತವನ್ನು ಸಡಲಿಸದಾಯ್ತು. ಆತ ಅದನ್ನು ಎಳೆದು ತೆಗೆಯುವವರೆಗೂ ಅದು ಆತನ ಮುಖದಲ್ಲೇ ನೇತಾಡುತ್ತಿತ್ತು.

ಇದು ಭಾವೋದ್ರಿಕ್ತ ವಿದಾಯದ ಮುತ್ತು ಎಂದು ಗುವಾಂಗ್ಝೌ ಡೈಲಿ ವರದಿ ಮಾಡಿದೆ.

ಆಮೆಯನ್ನು ತನ್ನ ತುಟಿಗಳಿಂದ ಪ್ರತ್ಯೇಕಿಸಿದ ಆತ ಆಸ್ಪತ್ರೆಗೆ ಧಾವಿಸಿದ. ಅಲ್ಲಿಯವರೆಗೂ ಆತನಿಗೆ ತನಗಾದ ಗಾಯ ಗಂಭೀರ ರೂಪದ್ದೆಂದು ತಿಳಿದಿರಲಿಲ್ಲ.

ಅದು ಉತ್ತರ ಅಮೆರಿಕ ಮೂಲದ ಥಟ್ಟನೆ ಬಾಯಿ ಮುಚ್ಚಿಕೊಳ್ಳುವ ಗುಣವಿರುವ ಆಮೆ ಎಂದು 'ಶಾಂಘಾಯ್ ಡೈಲಿ' ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ