ವಿಶ್ವಸಂಸ್ಥೆ ಸ್ಥಾನ;ಭಾರತದ ಬೆಂಬಲಕ್ಕೆ ಶಹಬ್ಬಾಸ್ ಎಂದ ಪಾಕ್

ಶನಿವಾರ, 29 ಅಕ್ಟೋಬರ್ 2011 (13:47 IST)
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವು ತಾತ್ಕಾಲಿಕ ಸದಸ್ಯತ್ವ ಪಡೆಯುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ವ ಸಂಸ್ಥೆಯಲ್ಲಿನ ಪಾಕಿಸ್ತಾನದ ಪ್ರತಿನಿಧಿ ಅಬ್ದುಲ್ಲಾ ಹುಸೇನ್‌ ಹಾರೋನ್‌ ಶನಿವಾರ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನವು ತನ್ನ ಮಿತ್ರರು ಎಂದು ಪರಿಗಣಿಸಿದ್ದ ಹಲವಾರು ರಾಷ್ಟ್ರಗಳು ಇಂದು ಮಿತ್ರರಾಗಿ ಉಳಿದಿಲ್ಲ ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಷ್ಟ್ರಗಳ ತಾತ್ಕಾಲಿಕ ಸದಸ್ಯತ್ವಕ್ಕೆ ಭಾರತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಹಾರೋನ್‌ ಕರಾಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸ್ಥಾನ ಪಡೆಯಲು ಕೀರ್ಗಿಸ್ತಾನ್‌ ಮತ್ತು ಪಾಕಿಸ್ತಾನದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 129 ರಾಷ್ಟ್ರಗಳು ಪಾಕಿಸ್ತಾನ ಪರ ಮತ ಚಲಾಯಿಸಿದರೆ ಕೀರ್ಗಿಸ್ತಾನ ಪರ 55 ರಾಷ್ಟ್ರಗಳು ಮತ ಚಲಾಯಿಸಿದವು.

ಪಾಕಿಸ್ತಾನವು ಲೆಬನಾನ್‌ ಜಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಸದಸ್ಯತ್ವದ ಅವಧಿ 2012ರ ಜನವರಿ 1 ರಿಂದ ಎರಡು ವರ್ಷಗಳ ಅವಧಿಗೆ ಇರುತ್ತದೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವಕ್ಕಾಗಿ ಪಾಕಿಸ್ತಾನವು ಕಳೆದ ಆರು ತಿಂಗಳಿನಿಂದ ಶ್ರಮಿಸಿದೆ ಎಂದು ಹಾರೋನ್‌ ತಿಳಿಸಿದ್ದಾರೆ.

ವಿಶ್ವ ಸಂಸ್ಥೆಯ ಕೆಲವು ರಾಷ್ಟ್ರಗಳು ತಮ್ಮ ದೇಶದ ವಿರುದ್ಧ ಮಾಡಿರುವ ಆಪಾದನೆಯಿಂದ ನಾವೇನೂ ಕುಗ್ಗಿ ಹೋಗಿಲ್ಲ. ಜಾಗತಿಕ ವಿದ್ಯಮಾನದಲ್ಲಿ ಪಾಕಿಸ್ತಾನವು ಸಕಾರಾತ್ಮಕ ಪಾತ್ರ ವಹಿಸಲಿದೆ ಎಂದು ಹಾರೋನ್‌ ಹೇಳಿದ್ದಾರೆ.

ಪಾಕಿಸ್ತಾನವು 1952-53, 1968-69, 1976-77, 1983-84, 1993-94 ಮತ್ತು 2003-04ರಲ್ಲಿ ವಿಶ್ವ ಸಂಸ್ಥೆಯ ತಾತ್ಕಾಲಿಕ ಸದಸ್ಯತ್ವ ಪಡೆದಿತ್ತು.

ಪಾಕಿಸ್ತಾನ ಮತ್ತು ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸ್ಥಾನವನ್ನು 1968, 1977ಮತ್ತು 1984ರಲ್ಲಿ ಹಂಚಿಕೊಂಡಿದ್ದವು.

ವೆಬ್ದುನಿಯಾವನ್ನು ಓದಿ