ವೀಡಿಯೋ ಕಾನ್ಫರೆನ್ಸ್ ಮೂಲಕ ಪತ್ನಿಗೆ ವಿಚ್ಛೇದನ!

ಬುಧವಾರ, 21 ಸೆಪ್ಟಂಬರ್ 2011 (11:55 IST)
ಕೆನಡಾದಲ್ಲಿರುವ ಅನಿವಾಸಿ ಭಾರತೀಯನೊಬ್ಬ ವೀಡೀಯೋ ಕಾನ್ಫರೆನ್ಸ್‌ ಮೂಲಕ ತನ್ನ ಪತ್ನಿಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದನ್ನು ತಿರಸ್ಕರಿಸಿದ ನ್ಯಾಯಾಲಯ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಕುರಿತು ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಅವರು ಡಿಸೆಂಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದ್ದಾರೆ.

ಕೆನಡಾದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಕೆಲ್‌ (ಹೆಸರು ಬದಲಿಸಲಾಗಿದೆ) ತನ್ನ ಪತ್ನಿ ಅಪಮಾನ ಮಾಡುವ ಮೂಲಕ ಹಿಂಸೆ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದರಿಂದಾಗಿ ಆಕೆಗೆ ವಿಚ್ಛೇಧನ ನೀಡುವುದಾಗಿ ತಿಳಿಸಿದ್ದಾನೆ. ಮೈಕೆಲ್‌ನ ಪೋಷಕರು ಚೆನ್ನೈನಲ್ಲಿ ವಾಸಿಸುತ್ತಿದ್ದು, 29 ವರ್ಷದ ಮೈಕೆಲ್‌ನನ್ನು 23 ವರ್ಷದ ದಂತ ವೈದ್ಯೆ ಮೇರಿ ( ಹೆಸರು ಬದಲಿಸಲಾಗಿದೆ)ಯೊಂದಿಗೆ 2010ರ ನವೆಂಬರ್‌ನಲ್ಲಿ ತಿರುಚನಾಪಳ್ಳಿಯಲ್ಲಿ ಕ್ರೈಸ್ತ ಸಂಪ್ರದಾಯದ ಪ್ರಕಾರ ವಿವಾಹ ನಡೆದಿತ್ತು.

ಮದುವೆಯ ನಂತರ ಹೊಸ ಜೋಡಿ ಚೆನ್ನೈನಲ್ಲಿರುವ ವರನ ಮನೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇರಿ ಪದೇ ಪದೇ ಜಗಳ ತೆಗೆಯುತ್ತಿದ್ದು, ತಾನು ಹಾಗು ತನ್ನ ಪೋಷಕರನ್ನು ಅಪಮಾನಿಸುತ್ತಿದ್ದಳು ಎಂದು ಆಪಾದಿಸಿದ್ದಾನೆ. ಮದುವೆಯ ಸಂದರ್ಭದಲ್ಲಿ ತಾನು ಧೋತಿ ಮತ್ತು ಶರ್ಟ್‌ ಧರಿಸಲು ಇಚ್ಚಿಸಿದ್ದರೂ ತನ್ನ ಮಾವ ಸೂಟ್‌ ಧರಿಸುವಂತೆ ಒತ್ತಡ ಹೇರಿದ್ದರು ಎಂದು ಆಪಾದಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ ಪ್ರಮಾಣ ಪತ್ರ ಸಲ್ಲಿಸಿರುವ ಮೇರಿ, ತನ್ನ ಮೇಲಿರುವ ಎಲ್ಲ ಆಪಾದನೆಗಳನ್ನು ನಿರಾಕರಿಸಿದ್ದಾಳೆ. ತನ್ನ ಪತಿ ಹಾಗೂ ಆತನ ಪೋಷಕರು ಹಿಂಸೆ ನೀಡಿದ್ದಾರೆ ಎಂ‌ದು ಆಪಾದಿಸಿದ್ದಾರೆ. ತನ್ನ ಗಂಡನ ಮನೆಯವರು 7 ಲಕ್ಷ ರೂ. ವರದಕ್ಷಿಣೆ ತರುವಂತೆ ಒತ್ತಡ ಹೇರಿದ್ದರು ಎಂದು ಆಪಾದಿಸಿರುವ ಮೇರಿ, ತನ್ನ ಮನೆಯವರು 2 ಲಕ್ಷ ರೂ. ವರದಕ್ಷಿಣೆ ನೀಡಿದ್ದಾರೆ. ಮದುವೆಗಾಗಿ 14 ಲಕ್ಷ ರೂ. ವೆಚ್ಛಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಅತ್ತೆ (ಗಂಡನ ತಾಯಿ) ತುಂಬಾ ತೊಂದರೆ ನೀಡುತ್ತಿದ್ದರು ಹಾಗೂ ತನ್ನ ಹೆತ್ತವರೊಂದಿಗೆ ಸಂಪರ್ಕಿಸಲೂ ಸಹ ಬಿಡುತ್ತಿರಲಿಲ್ಲ ಎಂದು ಆಪಾದಿಸಿದ್ದಾರೆ. ಇದರ ನಡುವೆ ತನ್ನ ಪತಿ ಮೈಕೆಲ್‌ ಕೆನಡಾಕ್ಕೆ ಹೋದಾಗ ಆಕೆಗೆ ಜುಲೈ 2011ರಂದು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಿಷಯ ತಿಳಿಯಿತು ಎಂದು ಆಕೆ ಹೇಳಿದ್ದಾರೆ.

ನ್ಯಾಯಾಲಯಕ್ಕೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಅರ್ಜಿ ಸಲ್ಲಿಸಿರುವ ಮೈಕೆಲ್‌ ಈ ಪ್ರಕರಣದಲ್ಲಿ ತನ್ನ ತಂದೆಯನ್ನೇ ಪ್ರಮುಖ ಸೂತ್ರಧಾರಿಯನ್ನಾಗಿಸಿದ್ದರು. ಇದು ಕೌಟುಂಬಿಕ ವಿಚಾರವಾಗಿರುವುದರಿಂದ ಅರ್ಜಿದಾರರು ಸಹಾ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಮೇರಿ ಪರ ವಕೀಲ ಇ. ಮಾರ್ಟಿನ್‌ ಜಯಕುಮಾರ್‌ ಅವರು ವಾದಿಸಿದರು.

ವೆಬ್ದುನಿಯಾವನ್ನು ಓದಿ