ಶರಣಾಗತಿಗೆ ಸಿದ್ಧನಾದ ಗಡಾಫಿ ಪುತ್ರ ಸೈಫ್‌ ಅಲ್‌ ಇಸ್ಲಾಂ

ಶನಿವಾರ, 29 ಅಕ್ಟೋಬರ್ 2011 (13:08 IST)
ಲಿಬಿಯಾದ ಮೃತ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಅವರ ಪುತ್ರ ಸೈಫ್‌ ಅಲ್‌ ಇಸ್ಲಾಂ ತನ್ನ ಶರಣಾಗತಿ ಕುರಿತು ಅಂತಾರಾಷ್ಟ್ರಿಯ ಅಪರಾಧ ನ್ಯಾಯಾಲಯ(ಐಸಿಸಿ)ದೊಂದಿಗೆ ಮಾತುಕತೆ ಆರಂಭಿಸಿದ್ದಾನೆ ಎಂದು ಐಸಿಸಿ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಧ್ಯವರ್ತಿಗಳ ಮೂಲಕ ನಾವು ಸೈಫ್‌ ಅಲ್‌ ಇಸ್ಲಾಂ ಸಂಪರ್ಕದಲ್ಲಿದ್ದೇವೆ ಎಂದು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ವಕೀಲ ಲೂಯಿಸ್‌ ಮೊರೆನೋ ಒಕಾಂಪೋ ಅವರು ತಿಳಿಸಿದ್ದಾರೆ. ಸೈಫ್‌ ಅಲ್‌ ಇಸ್ಲಾಂ ಅವರು ಐಸಿಸಿಗೆ ಶರಣಾಗಲಿದ್ದು, ತಾನು ನಿರಪರಾಧಿ ಎಂದು ವಾದಿಸುವ ಹಕ್ಕು ಅವರಿಗೆ ಇದೆ. ಈ ಕುರಿತು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ ಎಂದು ಒಕಾಂಪೋ ಹೇಳಿದ್ದಾರೆ.

ಐಸಿಸಿ ಸದಸ್ಯತ್ಯ ಹೊಂದಿಲ್ಲದ ಯಾವುದಾದರೂ ಆಫ್ರಿಕನ್‌ ರಾಷ್ಟ್ರಕ್ಕೆ ಪರಾರಿಯಾಗುವಂತೆ ಮುಅಮ್ಮರ್‌ ಗಡಾಫಿಯ ಅಳಿದುಳಿದ ಸೈನಿಕರು ಸೈಫ್‌ಗೆ ಒತ್ತಾಯಿಸುತ್ತಿದ್ದಾರೆ ಎಂಬ ಅಂಶವು ಕೆಲವು ಮೂಲಗಳಿಂದ ತಮಗೆ ತಿಳಿದು ಬಂದಿದೆ ಎಂದು ಒಕಾಂಪೋ ತಿಳಿಸಿದ್ದಾರೆ.

ಗಡಾಫಿಯ ಪುತ್ರ ಸೈಫ್‌ ಅಲ್‌ ಇಸ್ಲಾಂ ಮತ್ತು ಗಡಾಫಿಯ ಭದ್ರತಾ ಪಡೆಯ ಮುಖ್ಯಸ್ಥನಾಗಿದ್ದ ಅಬ್ದುಲ್ಲಾ ಅಲ್‌ ಸೆನ್ನೂಸಿ ಅವರು ಅಂತಾರಾಷ್ಟ್ರಿಯ ಅಪರಾಧ ನ್ಯಾಯಾಲಯದ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದಾರೆ.

ಮಾನವೀಯತೆಗೆ ವಿರೋಧವಾಗಿ ವರ್ತಿಸಿದ ಆಪಾದನೆಯ ಮೇರೆಗೆ ಸೈಫ್‌ ಅಲ್‌ ಇಸ್ಲಾಂ ಮತ್ತು ಅಬ್ದುಲ್ಲಾ ಅಲ್‌ ಸೆನ್ನೂಸಿ ಅವರ ಬಂಧನಕ್ಕೆ ಐಸಿಸಿ ಆದೇಶ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ