ಸಮುದ್ರಕ್ಕಿಳಿದ ಇಂಡೋನೇಶ್ಯ ವಿಮಾನ

ಭಾನುವಾರ, 14 ಏಪ್ರಿಲ್ 2013 (10:49 IST)
PR
PR
ಇಂಡೋನೇಶ್ಯದ ರೆಸಾರ್ಟ್ ದ್ವೀಪ ಬಾಲಿಯಲ್ಲಿ 100ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನವೊಂದು ಶನಿವಾರ ಭೂಸ್ಪರ್ಶದ ವೇಳೆ ರನ್‌ವೇ ಮೀರಿ ಹಾರಿ ಸಮುದ್ರಕ್ಕೆ ಜಿಗಿದಿದೆ. ಘಟನೆಯಲ್ಲಿ 22 ಮಂದಿಗೆ ಗಾಯಗಳಾಗಿವೆ. ಲಯನ್ ಏರ್ ವಿಮಾನದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಬಾಲಿಯ ರಕ್ಷಣಾ ಮತ್ತು ಪರಿಹಾರ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ವಿಮಾನದಲ್ಲಿ 101 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಯಿದ್ದರು ಎಂಬುದು ಆರಂಭಿಕ ವಿಚಾರಣೆಯಿಂದ ತಿಳಿದುಬಂದಿದೆ. ರಕ್ಷಣಾ ಕಾರ್ಯಕರ್ತರು ರಬ್ಬರ್ ದೋಣಿಗಳನ್ನು ಬಳಸಿ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ತೆರವುಗೊಳಿಸಿದರು. ವಿಮಾನ ಅಂತಿಮವಾಗಿ ಸಮುದ್ರದ ಬದಿಯಲ್ಲೇ ನೀರಿನಲ್ಲಿ ನಿಂತಿತ್ತು.

ವಿಮಾನ ರನ್‌ವೇ ಮೀರಿ ಹಾರಿತು ಹಾಗೂ ಸುಮಾರು 50 ಮೀಟರ್ ಎತ್ತರದಿಂದ ಸಮುದ್ರಕ್ಕೆ ಬಿತ್ತು ಎಂದು ಸಾರಿಗೆ ಸಚಿವಾಲಯದ ವಾಯುಯಾನ ಮಹಾ ನಿರ್ದೇಶಕ ಹ್ಯಾರಿ ಬಕ್ತಿ ಗುಮೇ ಹೇಳಿದರು. ಅಪಘಾತಕ್ಕೆ ಕಾರಣ ಗೊತ್ತಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಗುಮೇ ತಿಳಿಸಿದರು.

ತಲೆಗೆ ಗಾಯ ಮತ್ತು ಮೂಳೆ ಮುರಿತಕ್ಕೊಳಗಾದ ಕನಿಷ್ಠ ಏಳು ಮಂದಿಯನ್ನು ಸಂಗ್ಲಾಹ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಒದ್ದೆ ಬಟ್ಟೆಗಳು ಮತ್ತು ತರಚಿದ ಗಾಯಗಳೊಂದಿಗೆ ಹಲವು ಪ್ರಯಾಣಿಕರು ಅಲ್ಲಿಗೆ ಆಗಮಿಸಿದರು.

ವೆಬ್ದುನಿಯಾವನ್ನು ಓದಿ