ಹವಾಮಾನ ವೈಪರೀತ್ಯ:ಭಾರತವನ್ನು ಪ್ರಶ್ನಿಸುತ್ತೇವೆ-ಅಮೆರಿಕ

ಮಂಗಳವಾರ, 22 ಡಿಸೆಂಬರ್ 2009 (12:50 IST)
ಜಾಗತಿಕ ತಾಪಮಾನ ವೈಪರೀತ್ಯ ತಡೆ ಕುರಿತಂತೆ ಭಾರತ ಮತ್ತು ಚೀನಾ ಜಾಗತಿಕ ತಾಪಮಾನ ಕರಡಿನಲ್ಲಿ ಸೂಚಿಸಿದ ಅಂಶಗಳಿಗೆ ತಕ್ಕಂತೆ ಒಂದು ಗುರಿ ಇಟ್ಟುಕೊಳ್ಳಬೇಕು. ಅದಕ್ಕೆ ಬದ್ಧತೆ ತೋರದಿದ್ದಲ್ಲಿ ಅವುಗಳನ್ನು ಅಮೆರಿಕ ಪ್ರಶ್ನಿಸಲಿದೆ ಎಂದು ಶ್ವೇತಭವನದ ಹಿರಿಯ ಸಲಹೆಗಾರ ಡೇವಿಡ್ ಅಕ್ಸೆಲ್ರಾಡ್ ತಿಳಿಸಿದ್ದಾರೆ.

ಕೋಪನ್‌ಹೇಗನ್‌ನಲ್ಲಿ ಸುಮಾರು 12ದಿನಗಳ ಕಾಲ ನಡೆದ ಹವಾಮಾನ ವೈಪರೀತ್ಯ ತಡೆ ಶೃಂಗಸಭೆಯಲ್ಲಿ ಶ್ರೀಮಂತ ದೇಶಗಳು ಕ್ಯೋಟೊ ನಿಯಮಾವಳಿಯನ್ನು ಹೇರುವುದನ್ನು ಭಾರತ, ಚೀನಾ ಸೇರಿದಂತೆ ಹಲವು ಅಭಿವೃದ್ಧಿಶೀಲ ದೇಶಗಳು ತೀವ್ರವಾಗಿ ವಿರೋಧಿಸಿದ್ದವು.

ಅಲ್ಲದೇ ಶೃಂಗಸಭೆಯಲ್ಲಿ ಹವಾಮಾನ ವೈಪರೀತ್ಯ ತಡೆಗೆ ಒಮ್ಮತ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ, ಚೀನಾ ಕಿಡಿಕಾರಿದ್ದವು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಇದೀಗ ಭಾರತದ ಮೇಲೆ ಸವಾರಿ ಮಾಡಲು ಹೊರಟಿದೆ. ಭಾರತ ಮತ್ತು ಚೀನಾ ತಾಪಮಾನ ಏರಿಕೆ ನಿಯಂತ್ರಿಸದಿದ್ದಲ್ಲಿ ಆ ದೇಶಗಳನ್ನು ನಾವು ಪ್ರಶ್ನಿಸಬಹುದು ಎಂದು ಅಮೆರಿಕ ತಿರುಗೇಟು ನೀಡಿದೆ.

ವೆಬ್ದುನಿಯಾವನ್ನು ಓದಿ