ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದೂ ಧರ್ಮಕ್ಕೆ

ಶುಕ್ರವಾರ, 6 ಆಗಸ್ಟ್ 2010 (18:15 IST)
ಲಂಡನ್: ತಾನು ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ಸಂಪ್ರದಾಯದಂತೆ ದೇವಸ್ಥಾನಕ್ಕೆ ಹೋಗಿ ಮಂತ್ರ ಪಠಿಸಿ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹಾಲಿವುಡ್ ಜನಪ್ರಿಯ ನಟಿ ಜೂಲಿಯಾ ರಾಬರ್ಟ್ಸ್ ಬಹಿರಂಗಪಡಿಸಿದ್ದಾರೆ.

ಕ್ಯಾಥೊಲಿಕ್ ಮತ್ತು ಬ್ಯಾಪಿಸ್ಟ್ ದಂಪತಿಗಳ ಪುತ್ರಿಯಾಗಿರುವ 42ರ ಹರೆಯದ ತಾರೆ ಈ ವಿಚಾರವನ್ನು 'ಇಲ್ಲೆ' ಎಂಬ ನಿಯತಕಾಲಿಕಕ್ಕೆ ತಿಳಿಸಿದ್ದಾರೆ. ತನ್ನ ಗಂಡ ಡ್ಯಾನಿ ಮಾಡರ್ ಮತ್ತು ಮೂವರು ಮಕ್ಕಳೊಂದಿಗೆ ತಾನು ಹಿಂದೂ ಧರ್ಮದ ದೇವಳಗಳಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ತನ್ನ 'ಈಟ್, ಪ್ರೇ, ಲವ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಜ್ಯೂಲಿಯಾ ರಾಬರ್ಟ್ಸ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಚಿತ್ರದಲ್ಲಿ ಆಕೆ ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಮಹಿಳೆಯ ಪಾತ್ರವನ್ನು ಮಾಡಿದ್ದಾರೆ.

ಖ್ಯಾತ ನಟಿ ಹೇಳಿಕೆ ನೀಡುತ್ತಿದ್ದಂತೆ ಹಿಂದೂ ಸಮುದಾಯ ಆಕೆಗೆ ಭರ್ಜರಿ ಸ್ವಾಗತ ಕೋರಿದೆ. ಶ್ರೀಮಂತ ಮತ್ತು ಪುರಾತನ ಹಿಂದೂ ತತ್ವಶಾಸ್ತ್ರದ ಕುರಿತು ಆಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಅವರಿಗೆ ಪೂರಕ ಸಹಕಾರಗಳನ್ನು ನೀಡಲಾಗುತ್ತದೆ ಎಂದು ಅಮೆರಿಕಾದ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಸಂಸ್ಥೆಯ ಅಧ್ಯಕ್ಷರಾಗಿರುವ ರಾಜನ್ ಜೇಡ್ ನೇವಡದಲ್ಲಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಜ್ಯೂಲಿಯಾ ತನ್ನ ಮೂರು ಮಕ್ಕಳಿಗೆ ಲಕ್ಷ್ಮಿ, ಗಣೇಶ್ ಮತ್ತು ಕೃಷ್ಣ ಬಲರಾಮ್ ಎಂದೂ ಮರು ನಾಮಕರಣಗೊಳಿಸಿದ್ದಾರೆ. ತನ್ನ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದ ಆಕೆ, ಹರ್ಯಾಣಾದ ಆಶ್ರಮ್ ಹರಿ ಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸ್ವಾಮಿ ಧರಮ್ ದೇವ್ ಅವರು, ಜ್ಯೂಲಿಯಾ ಮಕ್ಕಳಿಗೆ ಮರು ನಾಮಕರಣಗೊಳಿಸಿದ್ದರು.

ವೆಬ್ದುನಿಯಾವನ್ನು ಓದಿ