ಫೇಸ್‌‍ಬುಕ್ ಮೂಲಕ ಭಯೋತ್ಸಾದಕರ ಗುಂಪಿಗೆ ಸೇರಿದ ಲಂಡನ್ ಬಾಲಕಿಯರು

ಬುಧವಾರ, 25 ಫೆಬ್ರವರಿ 2015 (16:45 IST)
ಲಂಡನ್‌ನಿಂದ  ಕಾಣೆಯಾಗಿರುವ ಮೂವರು ಬಾಲಕಿಯರನ್ನು ಇಸ್ಲಾಮಿಕ್ ಸ್ಟೇಟ್  ಭಯೋತ್ಪಾದಕರ ಗುಂಪನ್ನು ಸೇರಲು ಪ್ರಚೋದಿಸಲಾಗಿದೆ ಎಂಬ ಭಯಾನಕ ಸಂಗತಿ ಬೆಳಕಿಗೆ ಬಂದಿದೆ. ಶಮೀಮಾ ಬೇಗಂ, ಅಮೀರಾ ಅಬೇಸ್ ಮತ್ತು ಕಡೀಜಾ ಸುಲ್ತಾನಾ ಸಿರಿಯಾವನ್ನು ಮುಟ್ಟಿರುವುದಾಗಿ ಬ್ರಿಟಿಷ್ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಲಂಡನ್ ನಿವಾಸದಿಂದ ಹೊರಟಿದ್ದ ಈ ಮೂವರು ಬಾಲಕಿಯರು ಫೆಬ್ರವರಿ 17 ರಂದು ಟರ್ಕಿಯ ಇಸ್ತಾನ್‌ಬುಲ್‌ಗೆ ಪ್ರಯಾಣಿಸಿದ್ದರು.

ಆದರೆ ಇವರು ಟರ್ಕಿಯಲ್ಲಿಲ್ಲ, ಈಗಾಗಲೇ ಸಿರಿಯಾ ದಾಟಿದ್ದಾರೆ ಎಂದು ಪೊಲೀಸರು ಹೇಳಿದ್ದು, ಈ ಬಾಲಕಿಯರನ್ನು ಫೇಸ್ ಬುಕ್ ಜಾಲ ತಾಣದ ಮೂಲಕ ಸಂಪರ್ಕಿಸಿ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಪ್ರಚೋದಿಸಿರುವುದು ಬೆಳಕಿಗೆ ಬಂದಿದೆ. ಇಸ್ಲಾಮಿಕ್ ಸ್ಟೇಟ್ ಈಗಾಗಲೇ ಇರಾಕ್ ಮತ್ತು ಸಿರಿಯಾದ ಬಹುಭಾಗವನ್ನು ಆಕ್ರಮಿಸಿದ್ದು, ಸುನ್ನಿ ಮುಸ್ಲಿಂ ಕಲೀಫೇಟ್ ಎಂದು ಘೋಷಿಸಿದೆ. ಸಿರಿಯಾದಲ್ಲಿ ಪ್ರಾಬಲ್ಯ ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಗುಂಪನ್ನು ಈ ಬಾಲಕಿಯರು ಈಗಾಗಲೇ ಸೇರಿದ್ದಾರೆಂದು ಶಂಕಿಸಲಾಗಿದೆ. 

ಅತ್ಯಂತ ಕ್ರೂರ ಹಿಂಸಾಚಾರದಲ್ಲಿ ಒಳಗೊಂಡಿರುವ, ಬಾಲಕಿಯರನ್ನು 9 ವರ್ಷಕ್ಕೆ ಮದುವೆ ಮಾಡಿಸಬೇಕೆಂಬ, ಮಹಿಳೆಯರು ಮನೆಯಿಂದ ಹೊರಗೆ ಹೋಗಬಾರದೆಂಬ ಕಟ್ಟಪ್ಪಣೆ ಮಾಡಿರುವ ಭಯೋತ್ಪಾದನೆ ಸಂಘಟನೆಗೆ ಸೇರುವಂತೆ ಈ ಬಾಲಕಿಯರನ್ನು ಪ್ರಚೋದಿಸಿರಬಹುದು ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ