ದಿಲ್ಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ: ಆಪ್ ಪ್ರಣಾಳಿಕೆಯಲ್ಲಿ ಘೋಷಣೆ

ಶನಿವಾರ, 31 ಜನವರಿ 2015 (15:42 IST)
ಫೆಬ್ರವರಿ 7 ರಂದು ನಡೆಯಲಿರುವ ವಿಧಾನಸಭೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಶನಿವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ,  ಮಹಿಳಾ ರಕ್ಷಣೆ ಮತ್ತು ವಿದ್ಯುತ್ ಬಿಲ್ ತಗ್ಗಿಸುವ ಭರವಸೆಗಳಿಗೆ ಒತ್ತು ನೀಡಿದೆ. 
 
ಸಿಸಿಟಿವಿ ಕ್ಯಾಮರಾ ಬಳಸಿ ಮಹಿಳಾ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಪ್ ಹೇಳಿದೆ. 
 
20 ಹೊಸ ಕಾಲೇಜುಗಳ ನಿರ್ಮಾಣ, 50 ಪ್ರತಿಶತ ವಿದ್ಯುತ್ ಬಿಲ್ ಇಳಿಕೆ, ಕೈಗೆಟಕುವ ದರದಲ್ಲಿ  ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಉಚಿತ ವೈ-ಫೈ ಝೋನ್ ನಿರ್ಮಾಣ ಸಹ ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ. 
 
ಈ ಹಿಂದೆ 49 ದಿನಗಳ ಕಾಲ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲು ನಾವು ಪ್ರಯತ್ನಿಸಿದ್ದೆವು. ಈಗಲೂ ಸಹ ಪ್ರಣಾಳಿಕೆಯಲ್ಲಿ ಮಾಡಿರುವ ಎಲ್ಲ ವಾಗ್ದಾನಗಳನ್ನು ನಾವು ಈಡೇರಿಸುತ್ತೇವೆ ಎಂದು ಆಪ್ ಆಶ್ವಾಸನೆ ನೀಡಿದೆ. 
 
ಬಿಜೆಪಿ ಇನ್ನುವರೆಗೂ ಪ್ರಣಾಳಕೆ ಬಿಡುಗಡೆ ಮಾಡದೇ ಇರುವುದರ ಬಗ್ಗೆ ಟೀಕಿಸಿರುವ ಕೇಜ್ರಿವಾಲ್ ಬಿಜೆಪಿ ಯಾವುದೇ ವಾಗ್ದಾನಗಳನ್ನು ಮಾಡಲು ನಾಚಿಕೆ ಪಡುತ್ತಿದೆ. ತಾವು ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಒಂದೇ ಒಂದು ಭರವಸೆಗಳನ್ನು ಪೂರೈಸಿಲ್ಲ ಎಂಬುದು ಈ ಹಿಂಜರಿಕೆಗೆ ಕಾರಣ ಎಂದು ವ್ಯಂಗ್ಯವಾಡಿದ್ದಾರೆ . 

ವೆಬ್ದುನಿಯಾವನ್ನು ಓದಿ