ಚೀನಾದಿಂದ ತೀವ್ರ ಒತ್ತಡ: ಭಿನ್ನಮತೀಯ ನಾಯಕ ಇಸಾ ವೀಸಾ ರದ್ದು

ಸೋಮವಾರ, 25 ಏಪ್ರಿಲ್ 2016 (15:40 IST)
ಚೀನಾದ ಭಿನ್ನಮತೀಯ ನಾಯಕ ಮತ್ತು ಉಯಿಗುರ್ ಕಾರ್ಯಕರ್ತ ದೋಲ್ಕುನ್ ಇಸಾಗೆ ಭಾರತ  ನೀಡಿದ್ದ ವೀಸಾ ವಿರುದ್ಧ ಚೀನಾ ಪ್ರತಿಭಟನೆ ಸೂಚಿಸಿದ್ದರಿಂದ ಭಾರತ ವೀಸಾ ಹಿಂತೆಗೆದುಕೊಂಡಿದೆ. 
 
ಈ ಸುದ್ದಿಯ 10 ಬೆಳವಣಿಗೆಗಳು ಕೆಳಗಿನಂತಿವೆ.
ಉಗ್‌ಯುರ್ ಕಾರ್ಯಕರ್ತ ದೋಲ್ಕುನ್ ಇಸಾ ಅವರಿಗೆ ಧರ್ಮಶಾಲಾದಲ್ಲಿ ನಡೆಯುವ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಈ ವಾರ ಭಾಗವಹಿಸಲು ಪ್ರವಾಸಿ ವೀಸಾವನ್ನು ನೀಡಲಾಗಿತ್ತು.  ದಲೈಲಾಮಾ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿತ್ತು. ಜರ್ಮನಿಯಲ್ಲಿ ಅಜ್ಞಾತರಾಗಿ ವಾಸಿಸುತ್ತಿರುವ ಇಸಾರನ್ನು ಚೀನಾ ಭಯೋತ್ಪಾದಕರೆಂದು ಕರೆದಿದ್ದು ಅವರಿಗೆ ವೀಸಾ ನೀಡಿದ್ದಕ್ಕೆ ಪ್ರತಿಭಟನೆ ಸೂಚಿಸಿತ್ತು.
 
 ಈ ಕುರಿತು ಇಸಾ ಪ್ರತಿಕ್ರಿಯಿಸಿ, ಭಾರತದ ಅಧಿಕಾರಿಗಳು ನನ್ನ ವೀಸಾ ರದ್ದುಮಾಡಿದ್ದಕ್ಕೆ ನಿರಾಶೆಯಾಗಿದೆ. ಭಾರತ ಸರ್ಕಾರದ ಕಷ್ಟದ ಸ್ಥಿತಿ ನನಗೆ ಅರ್ಥವಾಗುತ್ತದೆ. ನನ್ನ ಪ್ರವಾಸ ಇಂತಹ ವಿವಾದ ಹುಟ್ಟುಹಾಕಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. 
 
ಇಸಾ ವಿರುದ್ಧ ಇಂಟರ್‌‌ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದಿದ್ದರಿಂದ ಭಿನ್ನಮತೀಯ ನಾಯಕನ ವೀಸಾ ರದ್ದು ಮಾಡಿದ್ದಾಗಿ ಸರ್ಕಾರದ ಮೂಲಗಳು ಹೇಳಿವೆ.
 ಚೀನಾ ಇಸಾ ವಿರುದ್ಧ ಇಂಟರ್‌ಪೋಲ್ ನೋಟಿಸ್ ಇರುವುದನ್ನು ಉಲ್ಲೇಖಿಸಿ, ಅವರನ್ನು ವಿಚಾರಣೆಗೆ ಒಳಪಡಿಸುವುದು ಪ್ರಸಕ್ತ ರಾಷ್ಟ್ರಗಳ ಕರ್ತವ್ಯವಾಗಿದೆ ಎಂದು ತಿಳಿಸಿತ್ತು. ದೋಲ್ಕುನ್ ಈಸಾಗೆ ಭಾರತ ವೀಸಾ ನೀಡುವ ಮೂಲಕ ಅಜರ್ ಮಸೂದ್ ನಿಷೇಧಕ್ಕೆ ಅಡ್ಡಗಾಲು ಹಾಕಿದ ಚೀನಾಕ್ಕೆ ಭಾರತದ ತಿರುಗೇಟು ಎಂದು ಭಾವಿಸಲಾಗಿತ್ತು. ಆದರೆ ಭಾರತ ಉಲ್ಟಾ ಹೊಡೆದಿರುವುದನ್ನು ನೋಡಿದರೆ ಚೀನಾದಿಂದ ತೀವ್ರ ಒತ್ತಡ ಬಂದಿದೆಯೆಂದು ಭಾವಿಸಲಾಗುತ್ತಿದೆ.
 
ದೋಲ್ಕುನ್ ಇಸಾ ಜರ್ಮನಿ ಮೂಲದ ಉಯಿಗುರ್ ಕಾರ್ಯಕರ್ತ. ದೂರದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಈಸಾ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದಾನೆಂದು ಚೀನಾ ಆರೋಪಿಸಿತ್ತು. ಸ್ಥಳೀಯ ಉಯಿಗುರ್ ಜನಸಂಖ್ಯೆ ಮತ್ತು ಸರ್ಕಾರಿ ಪಡೆಗಳ ನಡುವೆ ಹಿಂಸಾಚಾರ ಮೇರೆಮೀರಿತ್ತು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 

ವೆಬ್ದುನಿಯಾವನ್ನು ಓದಿ