ಏಷ್ಯಾದಲ್ಲಿ ಚೀನಾ ವಿರುದ್ಧ ಭಾರತವನ್ನು ಎತ್ತಿಕಟ್ಟಲು ಅಮೆರಿಕ ಹುನ್ನಾರ: ಚೀನಾ

ಸೋಮವಾರ, 26 ಜನವರಿ 2015 (17:22 IST)
ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ತೋರಿಕೆಯದ್ದಾಗಿದೆ. ಅಧ್ಯಕ್ಷ ಬರಾಕ್ ಒಬಾಮಾ ಭೇಟಿ ಎರಡು ದೇಶಗಳ ನಡುವಿನ ಹುಸಿ ಸಂಬಂಧದ ಸಂಕೇತವಾಗಿದೆ ಎಂದು ಚೀನಾದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ಲೇವಡಿ ಮಾಡಿದೆ.
 
ಭಾರತದ 66ನೇ ಗಣರಾಜ್ಯೋತ್ಸವದ ಅಂಗವಾಗಿ ಬರಾಕ್ ಒಬಾಮಾ ಭಾನುವಾರ ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ನಿಟ್ಟಿನಲ್ಲಿ ಒಬಾಮಾ ಭೇಟಿ ಕುರಿತಂತೆ ಚೀನಾ ಪತ್ರಿಕೆ ಕುಹಕವಾಡಿದೆ.
 
ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಮುದ್ರೆ ಬಿದ್ದಿದ್ದು, ಅಮೆರಿಕನ್ ಕಂಪನಿಗಳು ಭಾರತಕ್ಕೆ ನಾಗರಿಕ ಪರಮಾಣು ತಂತ್ರಜ್ಞಾನವನ್ನು ಸರಬರಾಜು ಮಾಡಲಿದೆ ಎಂದು ನಿನ್ನೆ ಭಾರತ ಮತ್ತು ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತ್ತು.
 
ಒಬಾಮಾ ಭೇಟಿಯಿಂದ ಭಾರತಕ್ಕೆ ವ್ಯವಹಾರಿಕವಾಗಿ ಲಾಭವಾಗಿದೆ. ಎರಡೂ ದೇಶಗಳ ಹವಾಮಾನ ವೈಪರೀತ್ಯ, ಕೃಷಿಯಲ್ಲಿ ಭಾರೀ ವ್ಯತ್ಯಾಸಗಳಿವೆ. ಇದೀಗ ಉಭಯ ದೇಶಗಳು ಸ್ನೇಹ ಹಸ್ತ ಚಾಚಿರೋದು ವೈಚಿತ್ರ್ಯವಾಗಿದೆ ಎಂದು ಕ್ಸಿನ್ ಹುವಾ ಆರೋಪಿಸಿದೆ. 
 
ಅಷ್ಟೇ ಅಲ್ಲ ಎರಡು ದೇಶಗಳ ಒಪ್ಪಂದ ಚೀನಾದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದು, ಅಮೆರಿಕ ಮತ್ತು ಭಾರತ ನಡುವಿನ ರಾಯಭಾರಿ ವಿವಾದವನ್ನು ಕೆದಕಿ ಹೇಳುವ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ತೋರಿಕೆಯದ್ದಾಗಿದೆ ಎಂದು ವರದಿ ಮಾಡಿದೆ.
 

ವೆಬ್ದುನಿಯಾವನ್ನು ಓದಿ