ಸೆಲ್ಫೀ ತೆಗೆಯಲು ಹೋಗಿ ಕಚ್ಚಿದ ಹಾವು: ಕೈ ಕಳೆದುಕೊಳ್ಳುವ ಭೀತಿ

ಗುರುವಾರ, 27 ಆಗಸ್ಟ್ 2015 (20:29 IST)
ಅಮೆರಿಕದಲ್ಲಿ ಸೆಲ್ಫೀ ತೆಗೆಸಿಕೊಳ್ಳಲು ಯತ್ನಿಸಿ ವಿಷಯುಕ್ತ ಹಾವು ಕಚ್ಚಿದ ಎರಡನೇ ಘಟನೆ ಸಂಭವಿಸಿದ್ದು, ಇನ್ನೊಬ್ಬ ವ್ಯಕ್ತಿಗೆ ಘೋರ ವಿಷದ ಬುಡುಬುಡಿಕೆ ಹಾವು ಕಚ್ಚಿದೆ. ಈ ವ್ಯಕ್ತಿ ಕೂಡ ಹಾವಿನ ಜತೆ ಸೆಲ್ಫೀ ತೆಗೆಸಿಕೊಳ್ಳಲು ಪ್ರಯತ್ನಿಸಿದಾಗ ಹಾವು ಕಚ್ಚಿತು. ಕ್ಯಾಲಿಫೋರ್ನಿಯಾದಲ್ಲಿ  4 ಅಡಿ ಉದ್ದದ ಬುಡುಬುಡಿಕೆ ಹಾವನ್ನು ಪಕ್ಕದಲ್ಲಿಟ್ಟುಕೊಂಡು ಸೆಲ್ಫೀ ತೆಗೆಸಿಕೊಳ್ಳಲು 36 ವರ್ಷದ ಅಲೆಕ್ಸ್ ಗೋಮೆಜ್ ಪ್ರಯತ್ನಿಸಿದಾಗ ಹಾವು ಅವನ ಕೈಗೆ ಕಚ್ಚಿತ್ತು. 
 
ಗೋಮೆಜ್ ಈ ಹಾವನ್ನು ಸೋಮವಾರ ಹಿಡಿದು ಸೆಲ್ಫೀ ತೆಗೆಯುವ ಭಯಾನಕ ತಪ್ಪನ್ನು ಮಾಡಿದ್ದ.  ಗೋಮೆಜ್ ಕುತ್ತಿಗೆಯ ಸುತ್ತ ಹಾವು ಇದ್ದಿದ್ದನ್ನು ನೋಡಿ ನನಗೆ ಆಘಾತವಾಗಿತ್ತು. ಅದು ಕುತ್ತಿಗೆಗೆ ಕಚ್ಚಿದ್ದರೆ ಅವನ ಸಾವು ಸಂಭವಿಸುತ್ತಿತ್ತು. ಇದೊಂದು ಮೂರ್ಖತನದ ಕೃತ್ಯ ಎಂದು ಅಲೆಕ್ಸ್ ತಾಯಿ ಹೇಳಿದ್ದಾರೆ.  ಮೂರು ಮಕ್ಕಳ ತಂದೆಯಾದ ಗೋಮೆಜ್‌ಗೆ ಹಾವು ಕಚ್ಚಿದ ಕೂಡಲೇ ಅಸಹನೀಯ ನೋವನ್ನು ಅನುಭವಿಸಿ ಸ್ಥಳೀಯ ಆಸ್ಪತ್ರೆಗೆ ಸೇರಿದ. ಅಲ್ಲಿ ಅವನ ಕೈ ಊದಿಕೊಂಡು ದೇಹವು ನಡುಗತೊಡಗಿತ್ತು.
 
ಗೋಮೆಜ್‌ಗೆ ವಿಷ ನಿರೋಧಕ ಔಷಧಿಯ ಚಿಕಿತ್ಸೆ ನೀಡಿದರೂ ಅವನು ಕೈಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಾಯಿ ಹೇಳಿದ್ದಾರೆ. ವಿಷವು ಅವನ ದೇಹಕ್ಕೆ ಆವರಿಸಿದ್ದರಿಂದ ಚರ್ಮವು ಕೊಳೆಯುತ್ತಿದೆ ಎಂದು ತಾಯಿ ಹೇಳಿದರು.  ಜುಲೈನಲ್ಲಿ ಕ್ಯಾಲಿಫೋರ್ನಿಯಾದ ಇನ್ನೊಬ್ಬ ವ್ಯಕ್ತಿ ಈ ಹಾವಿನೊಂದಿಗೆ ಸೆಲ್ಫೀ ತೆಗೆಯಲು ಹೋಗಿ ಹಾವು ಕಚ್ಚಿದ್ದರಿಂದ  ಆಸ್ಪತ್ರೆ ಬಿಲ್ 150,000 ಡಾಲರ್‌ಗಳನ್ನು ವೆಚ್ಚಮಾಡಿದ್ದ. 

ವೆಬ್ದುನಿಯಾವನ್ನು ಓದಿ