ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ಗೆ ಬಂಧನದ ವಾರಂಟ್

ಶನಿವಾರ, 20 ಫೆಬ್ರವರಿ 2016 (18:59 IST)
ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಅವರಿಗೆ ಮತ್ತೆ ಕಂಟಕ ಎದುರಾಗಿದ್ದು, ಲಾಲ್ ಮಸೀದಿ ಧರ್ಮಗುರು ಅಬ್ದುಲ್ ರಷೀದ್ ಗಾಜಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ಬಂಧನದ ಆದೇಶವನ್ನು ನೀಡಲಾಗಿದೆ.  ಇಸ್ಲಾಮಾಬಾದ್ ಸ್ಥಳೀಯ ಕೋರ್ಟೊಂದು ಈ ಆದೇಶ ನೀಡಿದ್ದು, ಮಾರ್ಚ್ 16ರೊಳಗೆ ಮುಷರಫ್ ಅವರನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. 
 
ಈ ಪ್ರಕರಣದಲ್ಲಿ ಕಾಯಂ ವಿನಾಯಿತಿ ನೀಡಬೇಕೆಂಬ ಮುಷರಫ್ ಕೋರಿಕೆಯನ್ನು ಕೋರ್ಟ್ ತಿರಸ್ಕರಿಸಿ ವಾರಂಟ್ ಜಾರಿ ಮಾಡಿದೆ. 72 ವರ್ಷದ ಮಾಜಿ ಅಧ್ಯಕ್ಷ ಮುಂಚಿನ 55 ವಿಚಾರಣೆಗಳಿಗೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಮಿಲಿಟರಿ ಕಮಾಂಡೊಗಳು ಮುಷರಫ್ ಆದೇಶದ ಮೇರೆಗೆ ಇಸ್ಲಾಮಾಬಾದ್ ಮಧ್ಯಭಾಗದಲ್ಲಿರುವ ಮಸೀದಿಗೆ ಮುತ್ತಿಗೆ ಹಾಕಿದ ಕಾರ್ಯಾಚರಣೆಯಲ್ಲಿ ರಷೀದ್ ಹತ್ಯೆಯಾಗಿದ್ದರಿಂದ ಮುಷರಫ್ ವಿರುದ್ಧ ಷರೀಫ್ ಕುಟುಂಬ ಕೇಸ್ ದಾಖಲು ಮಾಡಿತ್ತು. 
 
 2007ರ ಜುಲೈನಲ್ಲಿ ನಡೆದ ಮೂರು ದಿನಗಳ ಮುತ್ತಿಗೆಯಲ್ಲಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕ ಮಂದಿ ಹತರಾಗಿದ್ದರು.  ಮುಷರಫ್ ಅವರು 1999ರಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದಿದ್ದರು. 2008 ಚುನಾವಣೆಯಲ್ಲಿ ವಾಗ್ದಂಡನೆ ಎದುರಿಸಿದ ಮುಷರಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದರು. 
 

ವೆಬ್ದುನಿಯಾವನ್ನು ಓದಿ