ಆಸ್ಟ್ರೇಲಿಯಾದ ಅತೀ ಕಿರಿಯ ಬಿಲಿಯಾಧಿಪತಿ ಈಗ ದಿವಾಳಿ

ಗುರುವಾರ, 3 ಮಾರ್ಚ್ 2016 (19:21 IST)
ಆಸ್ಟ್ರೇಲಿಯಾದ ಅತೀ ಕಿರಿಯ ಬಿಲಿಯಾಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಆಸ್ಟ್ರೇಲಿಯಾದ ಕಲ್ಲಿದ್ದಲು ದೊರೆ ನಾಥನ್ ಟಿಂಕ್ಲರ್ ಕೇವಲ ಐದು ವರ್ಷಗಳಲ್ಲೇ ಅಧಿಕೃತವಾಗಿ ದಿವಾಳಿಯಾಗಿದ್ದಾರೆ.  ಟಿಂಕ್ಲರ್ ಸ್ಪೋರ್ಟಿಂಗ್ ಕ್ಲಬ್‌ಗಳು ಮತ್ತು ಕುದುರೆ ರೇಸಿಂಗ್‌ಗೆ ಮಿಲಿಯಾಂತರ ಡಾಲರ್ ವೆಚ್ಚ ಮಾಡುತ್ತಾ ಐಷಾರಾಮಿ ಜೀವನ ನಡೆಸಿದ್ದರು. ಆ ಮಾರ್ಗದಲ್ಲಿ ಅವರು ಶತ್ರುಗಳನ್ನು ಕೂಡ ಸಂಪಾದಿಸಿದ್ದರು. ಗುರುವಾರ ಅವರು ಸಾಲದಾತರಿಗೆ ಮತ್ತು ತಮ್ಮ ಕುಟುಂಬಕ್ಕೆ ಕ್ಷಮೆ ಕೋರಿದರು.
 
40 ವರ್ಷ ವಯಸ್ಸಿನ ಟಿಂಕ್ಲರ್ ಗಣಿಗಾರಿಕೆಯಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸಕ್ಕೆ ಸೇರಿ ಕಲ್ಲಿದ್ದಲು ವಹಿವಾಟುಗಳ ಸರಣಿಯಲ್ಲಿ ಅಪಾರ ಸಂಪತ್ತನ್ನು ಸೃಷ್ಟಿಸಿದ್ದರು.  ಆಸ್ಟ್ರೇಲಿಯಾದ ಯುವ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದು  2011ರಲ್ಲಿ 1.13 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತು ಹೊಂದಿದ್ದರು. 
 
ಅವರ ವಿಪುಲ ಸಂಪತ್ತಿನಿಂದಾಗಿ ಎರಡು ರಾಷ್ಟ್ರೀಯ ಕ್ರೀಡಾ ಫ್ರಾಂಚೈಸಿಗಳಾದ ರಾಷ್ಟ್ರೀಯ ರಗ್ಬಿ ಲೀಗ್ ನ್ಯೂಕ್ಯಾಸಲ್ ನೈಟ್ಸ್ ಮತ್ತು ಎ-ಲೀಗ್ ಫುಟ್ಬಾಲ್ ಕ್ಲಬ್ ನ್ಯೂಕ್ಯಾಸಲ್ ಜೆಟ್ಸ್ ಖರೀದಿಸಿದರು.

ಆದರೆ ನಂತರದ ವರ್ಷಗಳಲ್ಲಿ ಕಲ್ಲಿದ್ದಲು ದರ ಕುಸಿದಿದ್ದರಿಂದ, ಟಿಂಕ್ಲರ್ ತೀವ್ರ ಹಣಕಾಸಿನ ಒತ್ತಡಕ್ಕೆ ಒಳಗಾಗಿ 2014ರಲ್ಲಿ ನೈಟ್ಸ್ ಮತ್ತು ಕುದುರೆ ಸಾಕಣೆ , ರೇಸಿಂಗ್ ಸಾಮ್ರಾಜ್ಯವನ್ನು ಮಾರಾಟ ಮಾಡಿದರು. ಕಳೆದ ವರ್ಷ ಜೆಟ್ಸ್ ಮಾಲೀಕತ್ವವನ್ನು ಕೂಡ ಕೈಬಿಟ್ಟಿದ್ದರು. ಕಿರಿಯ ವಯಸ್ಸಿನಲ್ಲೇ ಶ್ರೀಮಂತಿಕೆಯ ಉಚ್ಛ್ರಾಯ ಸ್ಥಿತಿಗೆ ಏರಿದ ಟಿಂಕ್ಲರ್ ಅಪಾರ ನಷ್ಟದಿಂದಾಗಿ ಅಧಿಕೃತವಾಗಿ ದಿವಾಳಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ