ಮೃತ ತಾಯಿಯ ಗರ್ಭದಲ್ಲಿ ಪವಾಡಸದೃಶವಾಗಿ ಬದುಕುಳಿದ ಮಗು

ಶನಿವಾರ, 26 ಜುಲೈ 2014 (19:34 IST)
ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿಯ ಅವಶೇಷಗಳಲ್ಲಿ 85 ಪ್ಯಾಲೆಸ್ಟೀನಿಯರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.ಇದರಿಂದಾಗಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನಿ ಹಮಾಸ್ ನಡುವೆ 19ನೇ ದಿನದ ಹೋರಾಟದಲ್ಲಿ ಮೃತರ ಸಂಖ್ಯೆ 985ಕ್ಕೇರಿದೆ.

ಶುಕ್ರವಾರ ಗಾಜಾ ಮೇಲೆ ಇಸ್ರೇಲ್ ದಾಳಿಯಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಡೇರ್ ಅಲ್ ಬಾಲಾದ ಗಾಜಾ ಪಟ್ಟಣದ ಮನೆಯೊಂದರ ಮೇಲೆ ವೈಮಾನಿಕ ದಾಳಿಯಿಂದ 23 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆ ಮೃತಪಟ್ಟರೂ ಕೂಡ ಅವಳ ಗರ್ಭದಲ್ಲಿದ್ದ  ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
 
 ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಹಿಳೆಯ ಗರ್ಭದಿಂದ ಅಕಾಲಿಕ ಮಗುವನ್ನು ಹೊರತೆಗೆದಿರುವುದು ಒಂದು ಪವಾಡ ಎಂದು ಹೇಳಿದ್ದಾರೆ. 
 
 ಶಸ್ತ್ರಚಿಕಿತ್ಸೆಯ ಮೇಜಿನ ಮೇಲೆ ತಾಯಿ ಮೃತಪಟ್ಟ ಬಳಿಕ ತುರ್ತು ಸಿ-ಸೆಕ್ಷನ್ ಆಪರೇಷನ್ ಮೂಲಕ ಮಗುವನ್ನು ವೈದ್ಯರು ಹೊರತೆಗೆದರು. ಮಧ್ಯರಾತ್ರಿ ಎರಡು ಮಹಡಿಗಳ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ನೆಲೆಸಿದ್ದಾಗ ಬಾಂಬ್ ದಾಳಿ ನಡೆಯಿತು. ಆಗ ಗರ್ಭಿಣಿ ಮಹಿಳೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಮುನ್ನವೇ ಗಾಯಗೊಂಡಿದ್ದ ತಾಯಿ ಸತ್ತಿದ್ದರಿಂದ ಮಗು ಬದುಕುಳಿದಿರುವ ಸಂಗತಿ ಒಂದು ಪವಾಡ ಎಂದು ವೈದ್ಯರು ತಿಳಿಸಿದರು.

 ತಾಯಿ ಮೃತಪಟ್ಟು ಐದು ನಿಮಿಷಗಳಲ್ಲಿಯೇ ಅವಳ ಗರ್ಭದಲ್ಲಿರುವ ಮಗು ಕೂಡ ಸಾಯುತ್ತದೆ. ಆದರೆ ತಾಯಿಯ ಗರ್ಭದಲ್ಲಿದ್ದ ಹೆಣ್ಣುಮಗು ಬದುಕುಳಿಯುವ ಸಾಧ್ಯತೆ 50/50 ಎಂದು ವೈದ್ಯರು ಹೇಳಿದ್ದರು. ಮಗುವಿನ ತಂದೆ ಇಸ್ಲಾಮಿಕ್ ಜಿಹಾದ್ ಜೊತೆ ಸಂಬಂಧ ಹೊಂದಿದ್ದು, ಅವನು ಅಡಗಿಕೊಂಡಿದ್ದಾನೆಂದು ವರದಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ